ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಬಿಜನಗೇರಾ ಗ್ರಾಮದ ಮೆಹಬೂಬ್ ಅಲಿ ಅವರು ಲೇಔಟ್ ನಿರ್ಮಾಣ ಉದ್ದೇಶಕ್ಕಾಗಿ ತಮ್ಮ ಎರಡು ಎಕರೆ ಜಮೀನಿನ ಖಾತಾ ಉತಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ಪಿಡಿಒ ಲಕ್ಷ್ಮೀ ಪ್ಯಾಟಿ ಅವರು ₹2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲಂಚದ ಬೇಡಿಕೆಯಿಂದ ಬೇಸತ್ತ ಮೆಹಬೂಬ್ ಅಲಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ರೂಪಿಸಿದ ಅಧಿಕಾರಿಗಳು, ಇಂದು ಪಿಡಿಒ ಲಕ್ಷ್ಮೀ ಪ್ಯಾಟಿ ಅವರು ತಮ್ಮ ಪತಿಯ ಬ್ಯಾಂಕ್ ಖಾತೆಗೆ ಫೋನ್‌ಪೇ ಮೂಲಕ ₹1.50 ಲಕ್ಷ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ ವೇಳೆ ದಾಳಿ ನಡೆಸಿದರು.

ಹಣ ವರ್ಗಾವಣೆಗೊಂಡ ತಕ್ಷಣ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಲಕ್ಷ್ಮೀ ಪ್ಯಾಟಿ ಅವರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!