ಅಯೋಧ್ಯೆಯ ರಾಮಮಂದಿರವನ್ನು ಗುರಿಯಾಗಿಸಿಕೊಂಡು ಸಂಚು ರೂಪಿಸಿದ್ದಾನೆ ಎಂಬ ಆರೋಪದ ಮೇಲೆ ಬಂಧಿತನಾಗಿರುವ ಶಂಕಿತ ಉಗ್ರ ಸುಹೇಲ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆತನಿಗೆ ಬಾಡಿಗೆಗೆ ಮನೆ ನೀಡಿದ್ದ ದಾವಣಗೆರೆ ಜಿಲ್ಲೆಯ ಬನ್ನಿಕೋಡು ಗ್ರಾಮದ ಕುಟುಂಬ ಇದೀಗ ತೀವ್ರ ಆಘಾತ ವ್ಯಕ್ತಪಡಿಸಿದೆ.
ಮನೆ ಮಾಲೀಕರಾದ ರೇಣುಕಮ್ಮ ಮತ್ತು ಗುತ್ಯಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ, “ಸುಮಾರು 15 ದಿನಗಳ ಹಿಂದೆ ಸುಹೇಲ್ ನಮ್ಮ ಮನೆಗೆ ಬಾಡಿಗೆಗೆ ಬಂದಿದ್ದ. ಆತನೊಂದಿಗೆ ಸುಮಾರು ಹತ್ತು ಮಂದಿ ಯುವಕರು ಕೂಡ ಇದ್ದರು. ತಿಂಗಳಿಗೆ ₹6,000 ಬಾಡಿಗೆ ನೀಡುವುದಾಗಿ ಹೇಳಿದ್ದರು” ಎಂದು ತಿಳಿಸಿದ್ದಾರೆ.
ಅವರ ಪ್ರಕಾರ, ಸುಹೇಲ್ ಮತ್ತು ಆತನ ಜೊತೆಗಿದ್ದವರು ಹಿಂದಿಯಲ್ಲೇ ಮಾತನಾಡುತ್ತಿದ್ದು, ಹಾಲು ಹಾಗೂ ಮಜ್ಜಿಗೆಯನ್ನು ಖರೀದಿಸುತ್ತಿದ್ದರು. ಸ್ಥಳೀಯರೊಂದಿಗೆ ಹೆಚ್ಚು ಬೆರೆಯದೇ ತಮ್ಮಷ್ಟಕ್ಕೆ ತಾವು ಇರುತ್ತಿದ್ದ ಕಾರಣ ಯಾವುದೇ ಅನುಮಾನ ಮೂಡಿರಲಿಲ್ಲ ಎಂದು ಹೇಳಿದ್ದಾರೆ.
ಜೂನ್ 23ರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ 20ಕ್ಕೂ ಹೆಚ್ಚು ಪೊಲೀಸರು ಮನೆಗೆ ಆಗಮಿಸಿ ಬಾಗಿಲು ತೆರೆಯುವಂತೆ ಸೂಚಿಸಿದರು. ಬಾಗಿಲು ತೆರೆದ ತಕ್ಷಣ ಪೊಲೀಸರು ಒಳನುಗ್ಗಿ ಮನೆಯಲ್ಲಿದ್ದವರನ್ನು ವಶಕ್ಕೆ ಪಡೆದರು. ತನಿಖೆಗಾಗಿ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಮಾತ್ರ ತಿಳಿಸಿದ್ದು, ಬಳಿಕ ಟಿವಿ ಸುದ್ದಿಗಳ ಮೂಲಕವೇ ಸುಹೇಲ್ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತನಾಗಿರುವುದು ತಿಳಿಯಿತು ಎಂದು ಅವರು ವಿವರಿಸಿದ್ದಾರೆ.
ಸುಹೇಲ್ ಬಗ್ಗೆ ಮಾತನಾಡಿದ ಮನೆ ಮಾಲೀಕರು, “ಆತ ಆಗಾಗ ನಮ್ಮ ಬೈಕ್ ಕೇಳುತ್ತಿದ್ದ. ಪ್ರತಿ ಶುಕ್ರವಾರ ನಮಾಜ್‌ಗೆ ತೆರಳುತ್ತಿದ್ದ. ಉಳಿದವರಿಗಿಂತ ಹೆಚ್ಚು ಚುರುಕಾಗಿ ಕಾಣಿಸುತ್ತಿದ್ದ. ಆದರೆ ಆತ ಇಂತಹ ಗಂಭೀರ ಚಟುವಟಿಕೆಗಳಲ್ಲಿ ತೊಡಗಿರಬಹುದು ಎಂದು ಎಂದಿಗೂ ಊಹಿಸಿರಲಿಲ್ಲ” ಎಂದು ಹೇಳಿದ್ದಾರೆ.
“ಅವನ ಹಾಗೂ ಆತನ ಸಹಚರರ ನಿಜವಾದ ಹಿನ್ನೆಲೆ ಮೊದಲೇ ಗೊತ್ತಿದ್ದರೆ ಯಾವುದೇ ಕಾರಣಕ್ಕೂ ಮನೆ ಬಾಡಿಗೆಗೆ ನೀಡುತ್ತಿರಲಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಸುಹೇಲ್‌ನ ವಿಚಾರಣೆ ಮುಂದುವರಿದಿದ್ದು, ಆತನ ಸಂಪರ್ಕ ಜಾಲ, ಚಟುವಟಿಕೆಗಳು ಹಾಗೂ ಆರೋಪಿತ ಸಂಚುಗಳ ಕುರಿತು ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿವೆ.
