ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ತಿಪ್ಪೇಸ್ವಾಮಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಿಢೀರ್ ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಹನುಮನಗರದಲ್ಲಿರುವ ನಿವಾಸ, ಕುಡತಿನಿಯಲ್ಲಿನ ಮನೆ ಹಾಗೂ ಸಿರುಗುಪ್ಪದಲ್ಲಿರುವ ಕಚೇರಿ ಸೇರಿದಂತೆ ಮೂರು ಸ್ಥಳಗಳಲ್ಲಿ ಲೋಕಾಯುಕ್ತ ಎಸ್ಪಿ ಎನ್. ವಾಸುದೇವರಾಮ ಅವರ ನೇತೃತ್ವದ ತಂಡಗಳು ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿವೆ.
ದಾಳಿಯ ವೇಳೆ ಬಳ್ಳಾರಿ ಹಾಗೂ ಸಂಡೂರು ಭಾಗಗಳಲ್ಲಿ ಹೊಂದಿರುವ 8 ಎಕರೆ ಜಮೀನಿನ ದಾಖಲೆಗಳು, 12 ನಿವೇಶನಗಳ ದಾಖಲೆ ಪತ್ರಗಳು, 290 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ ಆಭರಣ, ನಗದು ಹಣ, ಬ್ಯಾಂಕ್ ಖಾತೆಯಲ್ಲಿದ್ದ ₹50 ಲಕ್ಷ ಮೊತ್ತ ಹಾಗೂ ಕಾರು, ದ್ವಿಚಕ್ರ ವಾಹನ ಸೇರಿದಂತೆ ಒಟ್ಟು 8 ವಾಹನಗಳ ಮಾಹಿತಿ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ತಿಪ್ಪೇಸ್ವಾಮಿ ಅವರು ತಮ್ಮ ಆದಾಯಕ್ಕಿಂತ ಶೇ.174ರಷ್ಟು ಅಧಿಕ ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿದ್ದು, ಒಟ್ಟು ₹2.20 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಾಧೀಕ್ಷಕರಾದ ಸಿದ್ದಪ್ಪ ಎಸ್. ಬೀಳಗಿ, ಸಚಿನ್ ಎಸ್. ಚಲುವಾದಿ, ಪೊಲೀಸ್ ನಿರೀಕ್ಷಕರಾದ ಸುರೇಶ್ ಎಂ. ಬಾವಿಮನಿ, ಅಮರೇಶ್ ಸೇರಿದಂತೆ ಸುಮಾರು 30 ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದು, ತನಿಖೆ ಪೂರ್ಣಗೊಂಡ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
