ಮುಂಡಗೋಡ:ತಾಲೂಕಿನ ಹೆಸ್ಕಾಂ ಉಪವಿಭಾಗದ ಎಇಇ ಧರ್ಮರಾಜ ಬೆಡಸಗಾಂವ್ ಹಾಗೂ ಕಂದಾಯ ನಿರೀಕ್ಷಕ ಬಸವರಾಜ ಬಿಸನಾಳ ಅವರು ಪ್ರತ್ಯೇಕ ಪ್ರಕರಣಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಧರ್ಮರಾಜ ಬೆಡಸಗಾಂವ್ ಅವರು ₹65 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರವಾರ ಹಾಗೂ ಧಾರವಾಡ ಲೋಕಾಯುಕ್ತ ಘಟಕಗಳ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

ವಿದ್ಯುತ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದ್ದು, ಬಿಸಿಎಂ ವಸತಿ ನಿಲಯದ ವಿದ್ಯುತ್ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಸಂಬಂಧ ಹಣದ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಮುಂಗಡವಾಗಿ ₹65 ಸಾವಿರ ಸ್ವೀಕರಿಸುತ್ತಿದ್ದ ವೇಳೆ ಅವರನ್ನು ಕಚೇರಿಯಲ್ಲಿಯೇ ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ, ಪಾಳ ಹಾಗೂ ಮುಂಡಗೋಡ ವ್ಯಾಪ್ತಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಬಿಸನಾಳ ಅವರು ಕೂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಫಾರ್ಮ್ ಹೌಸ್ ಪರವಾನಿಗೆ ನೀಡುವ ಸಂಬಂಧ ರೈತರಾದ ನಾರಾಯಣ ಅರೆಜೋಗಿ ಅವರಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದ್ದು, ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಕಾರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಒಂದೇ ದಿನ ಎರಡು ಪ್ರಮುಖ ಇಲಾಖೆಗಳ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದ್ದು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಎರಡೂ ಪ್ರಕರಣಗಳ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬರುವ ನಿರೀಕ್ಷೆಯಿದೆ.

Related News

error: Content is protected !!