ಬೆಂಗಳೂರು ನಗರದಲ್ಲಿ ಪೊಲೀಸರ ಮೇಲೆಯೇ ದರೋಡೆ ಆರೋಪ ಕೇಳಿಬಂದಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣವು ರಾಜ್ಯ ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನೆ ಮೂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಮಾಹಿತಿಯ ಪ್ರಕಾರ, ಕೇರಳ ಮೂಲದ ಕೆಲ ಯುವಕರು ಬೆಂಗಳೂರಿನ ಹೋಟೆಲ್ನಲ್ಲಿ ತಂಗಿದ್ದು, ಅವರ ಬಳಿ ಸುಮಾರು ₹20 ಲಕ್ಷ ನಗದು ಹಣ ಇತ್ತು ಎನ್ನಲಾಗಿದೆ. ಈ ವೇಳೆ ಸಿಐಡಿ ಪೊಲೀಸ್ ಜೀಪ್ನಲ್ಲಿ ಬಂದ ಕೆಲವರು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು, ಪೊಲೀಸ್ ಐಡಿ ಕಾರ್ಡ್ ತೋರಿಸಿ ಹೋಟೆಲ್ಗೆ ಪ್ರವೇಶಿಸಿದ್ದಾರೆ.
ಬಳಿಕ ಯುವಕರ ಬಳಿ ಇದ್ದ ಹಣವನ್ನು ವಶಪಡಿಸಿಕೊಳ್ಳುವ ನೆಪದಲ್ಲಿ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯವನ್ನು ಕೇರಳ ಮೂಲದ ಯುವಕರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ನಂತರ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಮನಗಂಡು ತನಿಖೆ ಆರಂಭಿಸಿದ ಡಿಸಿಪಿ ಮಹಮ್ಮದ್ ಸಜಿತ್ ಹಾಗೂ ಅವರ ತಂಡ ಒಬ್ಬ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿಯ ಹೇಳಿಕೆಯ ಪ್ರಕಾರ, “ಅಸಲಿ ಪೊಲೀಸ್ ಇನ್ಸ್ಪೆಕ್ಟರ್ ಕಾರಿನಲ್ಲೇ ಇದ್ದರು. ನಾವು ಹೋಗಿ ಹಣ ತೆಗೆದುಕೊಂಡು ಬಂದೆವು” ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಕಮಿಷನರ್ ಕೂಡ ಪ್ರಕರಣದಲ್ಲಿ ಸತ್ಯಾಂಶ ಇರುವುದನ್ನು ಒಪ್ಪಿಕೊಂಡಿದ್ದು, ಆರೋಪ ಎದುರಿಸುತ್ತಿರುವ ಇನ್ಸ್ಪೆಕ್ಟರ್ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಇತರರಿಗೆ ಎಚ್ಚರಿಕೆ ಆಗುತ್ತದೆ” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೊಲೀಸರ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಆತಂಕ ಹೆಚ್ಚಿಸಿದ್ದು, ತನಿಖೆಯ ಅಂತಿಮ ವರದಿಯತ್ತ ಎಲ್ಲರ ಗಮನ ಸೆಳೆದಿದೆ.
