ಭಟ್ಕಳ: ಕೆಲ ದಿನಗಳಿಂದ ಶಾಂತವಾಗಿದ್ದ ಕರಾವಳಿ ನಗರ ಭಟ್ಕಳದಲ್ಲಿ ಮತ್ತೊಮ್ಮೆ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಗೆ ಸಂಬಂಧಿಸಿದ ಘಟನೆಯೊಂದರ ಹಿನ್ನೆಲೆಯಲ್ಲಿ ಕೆಲವು ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ನೂರಾರು ಹಿಂದೂ ಕಾರ್ಯಕರ್ತರು ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಮಾಹಿತಿಯ ಪ್ರಕಾರ, ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ಕಾರಿನಲ್ಲಿ ಕಾಡು ಪ್ರದೇಶದತ್ತ ತೆರಳುತ್ತಿದ್ದ ವೇಳೆ ಕೆಲವು ಕಾರ್ಯಕರ್ತರು ವಾಹನವನ್ನು ತಡೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯ ಸಂಬಂಧ ಕೆಲ ಹಿಂದೂ ಸಂಘಟನೆಗಳ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ಆರೋಪಿಸಲಾಗಿದ್ದು, ಇದನ್ನು ವಿರೋಧಿಸಿ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಘಟನೆಯಲ್ಲಿ ಭಾಗಿಯಾಗಿರುವ ಯುವಕನ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಹಾಗೂ ತನಿಖಾ ವರದಿ ಪ್ರಕಟವಾಗಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
