ಬಾಗಲಕೋಟೆ: ತಾಲ್ಲೂಕಿನ ನಾಯನೇಗಲಿ ಗ್ರಾಮದಲ್ಲಿ ಪಿಕೆಪಿಎಸ್ ಬ್ಯಾಂಕ್‌ನ ನೂತನ ಕಚೇರಿಯನ್ನು ಇಂದು ಬೆಳಿಗ್ಗೆ 9.30 ಗಂಟೆಗೆ ಬಾಗಲಕೋಟೆ ಗ್ರಾಮೀಣ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಗ್ರಾಮೀಣ ರೈತರ ಅಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದ್ದು, ಆಡಳಿತ ಮಂಡಳಿ ಹಾಗೂ ಅಧ್ಯಕ್ಷರು ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಂಘವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಸಂಘದ ಬೆಳವಣಿಗೆ ಹಾಗೂ ರೈತರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ವತಿಯಿಂದ ಶಾಸಕ ಉಮೇಶ್ ಮೇಟಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸಿದ್ದಲಿಂಗಯ್ಯ ಹಿರೇಮಠ ಗುರುಗಳು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವಂತಪ್ಪ ಮೇಟಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಸಂಗಪ್ಪ ಚಲವಾದಿ ವಹಿಸಿದ್ದರು.

ಪಿಕೆಪಿಎಸ್ ಸಿಇಒ ಮನೋಹರ ಕೋಟಿ ವಂದನಾರ್ಪಣೆ ಸಲ್ಲಿಸಿದರೆ, ನಿರ್ದೇಶಕ ಆರ್.ಎಚ್. ಕುಲಕರ್ಣಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ದುಂಡಪ್ಪ ವಾಲೀಕಾರ, ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related News

error: Content is protected !!