ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಲಂಚ ಸ್ವೀಕರಿಸುತ್ತಿದ್ದ ವೇಳೆ ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ಶಿವಕುಮಾರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಗಲಾಟೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ರಾಜೇಗೌಡ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಠಾಣೆಯ ಮಟ್ಟದಲ್ಲೇ ಜಾಮೀನು ನೀಡಿ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿ, ಎಎಸ್‌ಐ ಶಿವಕುಮಾರ್ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚದ ಬೇಡಿಕೆಯಿಂದ ಬೇಸತ್ತ ದೂರುದಾರರು, ಎಎಸ್‌ಐ ಜೊತೆ ನಡೆದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕಾರ್ಯಾಚರಣೆ ರೂಪಿಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಬಲೆಗೆ ಬೀಳಿಸುವ ಯೋಜನೆ ರೂಪಿಸಿದರು.
ಬುಧವಾರ ರಾತ್ರಿ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲೇ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶಿವಕುಮಾರ್ ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಲಂಚದ ಹಣವನ್ನು ವಶಪಡಿಸಿಕೊಂಡು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಕಾರ್ಯಾಚರಣೆ ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಲೇಪಾಕ್ಷಮೂರ್ತಿ ಹಾಗೂ ಬ್ಯಾಟರಾಯಗೌಡ ಅವರ ನೇತೃತ್ವದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಪೊಲೀಸ್ ಇಲಾಖೆಯಲ್ಲಿಯೇ ಭ್ರಷ್ಟಾಚಾರದ ಆರೋಪ ಕೇಳಿಬಂದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಲೋಕಾಯುಕ್ತರ ದಾಳಿ ಮತ್ತೊಮ್ಮೆ ಸರ್ಕಾರಿ ನೌಕರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
