ಕನ್ನಡ ಚಿತ್ರರಂಗದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧ ಮೂರು ದಶಕಗಳ ಹಿಂದೆ ಗಂಭೀರ ಆರೋಪ ಮಾಡಿದ್ದ ನಟಿ ಬಿಂದಿಯಾ, ಇದೀಗ 34 ವರ್ಷಗಳ ಬಳಿಕ ಆ ಘಟನೆ ನೆನೆದು ಭಾವುಕರಾಗಿ ಕ್ಷಮೆಯಾಚಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅಂದಿನ ಆರೋಪದಿಂದ ರವಿಚಂದ್ರನ್ ಅವರಿಗೆ ಅನಗತ್ಯ ತೊಂದರೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನೆಲ್‌ನ ‘ನೂರೊಂದು ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಂದಿಯಾ, ರವಿಚಂದ್ರನ್ ಬಗ್ಗೆ ಮಾತನಾಡುವ ವೇಳೆ ಕಣ್ಣೀರಿಟ್ಟರು. “ರವಿ ಸರ್ ನನಗೆ ದೊಡ್ಡ ಅವಕಾಶ ಕೊಟ್ಟಿದ್ದರು. ಆದರೆ ಒಂದು ಮ್ಯಾಗಜೀನ್‌ನಲ್ಲಿ ಪ್ರಕಟವಾದ ವರದಿಯಿಂದ ದೊಡ್ಡ ವಿವಾದ ಸೃಷ್ಟಿಯಾಯಿತು. ಆ ರೀತಿ ಆಗಬಾರದಿತ್ತು. ಇಂದಿಗೂ ಅವರು ತಮ್ಮ ಸಿನಿಮಾದಲ್ಲಿ ತಾಯಿ ಅಥವಾ ಅಜ್ಜಿ ಪಾತ್ರ ಕೊಟ್ಟರೆ ಯಾವುದೇ ಸಂಭಾವನೆ ಪಡೆಯದೇ ನಟಿಸಲು ಸಿದ್ಧಳಿದ್ದೇನೆ. ದಯವಿಟ್ಟು ಒಂದು ಅವಕಾಶ ಕೊಡಿ ಸರ್” ಎಂದು ಮನವಿ ಮಾಡಿದರು.
ಆ ಘಟನೆ ಬಳಿಕ ರವಿಚಂದ್ರನ್ ಅವರೊಂದಿಗೆ ನೇರವಾಗಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಬಿಂದಿಯಾ, “ನಾವು ಕೋರ್ಟ್‌ನಲ್ಲಿ ಮಾತ್ರ ಭೇಟಿಯಾದೆವು. ಆಗ ನಾನು ತುಂಬಾ ಚಿಕ್ಕವಳಾಗಿದ್ದೆ. ಪ್ರಬುದ್ಧತೆ ಇರಲಿಲ್ಲ. ನಂತರ ರವಿ ಸರ್ ಪ್ರಕರಣದಲ್ಲಿ ಗೆದ್ದರು ಹಾಗೂ ಬಳಿಕ ಅದನ್ನು ಹಿಂತೆಗೆದುಕೊಂಡರು. ಎಲ್ಲವೂ ಅಲ್ಲಿ ಮುಗಿದಿತ್ತು” ಎಂದು ನೆನಪಿಸಿಕೊಂಡರು.
ಅಂದಿನ ಪ್ರಕರಣದ ಕುರಿತು ಸ್ಪಷ್ಟನೆ ನೀಡಿದ ಅವರು, “ನಾನು ಹೇಳಿದ್ದೇ ಒಂದು, ಮ್ಯಾಗಜೀನ್‌ನಲ್ಲಿ ಪ್ರಕಟವಾದದ್ದು ಮತ್ತೊಂದು. ನನ್ನ ಆರೋಪಕ್ಕೆ ಯಾವುದೇ ಆಧಾರ ಇರಲಿಲ್ಲ. ಆ ವರದಿ ರವಿಚಂದ್ರನ್ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿತ್ತು. ಕೋರ್ಟ್‌ನಲ್ಲಿ ಅವರನ್ನು ನೋಡಿದಾಗ ನನಗೆ ತುಂಬಾ ಸಂಕಟವಾಯಿತು. ಅವರು ಯಾವುದೇ ತಪ್ಪು ಮಾಡಿರಲಿಲ್ಲ” ಎಂದು ಒಪ್ಪಿಕೊಂಡರು.
1992ರಲ್ಲಿ ಬಿಡುಗಡೆಯಾದ ‘ಹಳ್ಳಿಮೇಷ್ಟ್ರು’ ಚಿತ್ರದಲ್ಲಿ ಬಿಂದಿಯಾ ಮತ್ತು ರವಿಚಂದ್ರನ್ ಜೊತೆಯಾಗಿ ನಟಿಸಿದ್ದರು. ತಮಿಳಿನ ‘ಮುಂದಾನೈ ಮುಡಿಚು’ ಚಿತ್ರದ ರೀಮೇಕ್ ಆಗಿದ್ದ ಈ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಆದರೆ ಚಿತ್ರದ ಯಶಸ್ಸಿನ ಬಳಿಕ ಮ್ಯಾಗಜೀನ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಿಂದಿಯಾ, ರವಿಚಂದ್ರನ್ ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಆರೋಪಿಸಿದ್ದರು.
ಈ ಆರೋಪಗಳಿಂದ ಬೇಸರಗೊಂಡ ರವಿಚಂದ್ರನ್, ತಮ್ಮ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಂತೆ ಸವಾಲು ಹಾಕಿ ಕೇವಲ ಒಂದು ರೂಪಾಯಿಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ವೇಳೆ ಬಿಂದಿಯಾ, ತಾನು ಆ ರೀತಿಯ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿ ಕ್ಷಮೆಯಾಚಿಸಿದ್ದರು. ಬಳಿಕ ಪ್ರಕರಣ ಇತ್ಯರ್ಥಗೊಂಡಿತ್ತು.
ಈಗ ಹಲವು ವರ್ಷಗಳ ನಂತರ ಮತ್ತೆ ಆ ಘಟನೆಯನ್ನು ನೆನೆದ ಬಿಂದಿಯಾ, ರವಿಚಂದ್ರನ್ ಅವರ ವಿರುದ್ಧ ಮಾಡಲಾದ ಆರೋಪದಿಂದ ಅವರಿಗೆ ಆಗಿದ್ದ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ತಮ್ಮ ತಪ್ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.
