ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚೋಗಳೇರಿ ಹಟ್ಟಿ ಗ್ರಾಮದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಚೋಗಳೇರಿ ಹಟ್ಟಿ ಗ್ರಾಮದ ನಿವಾಸಿ ಮಂಜಣ್ಣ (30) ಬಂಧಿತ ಆರೋಪಿ ಆಗಿದ್ದು, ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕೆಲವು ತಿಂಗಳ ಹಿಂದೆ ಅಪ್ರಾಪ್ತ ಬಾಲಕಿ ತೀವ್ರ ಕೈ-ಕಾಲು ಹಾಗೂ ಹೊಟ್ಟೆ ನೋವಿನಿಂದ ಬಳಲತೊಡಗಿದ್ದಳು. ಆದರೆ ಕುಟುಂಬದವರು ಇದನ್ನು ಆರೋಗ್ಯ ಸಮಸ್ಯೆ ಎಂದು ಪರಿಗಣಿಸದೇ, ಬಾಲಕಿಗೆ ದೆವ್ವ ಅಥವಾ ಭೂತದ ಪ್ರಭಾವವಾಗಿದೆ ಎಂದು ಮೂಢನಂಬಿಕೆಗೆ ಒಳಗಾಗಿದ್ದರು.

ದೇವಸ್ಥಾನದವರ ಸಲಹೆ ಮೇರೆಗೆ ಬಾಲಕಿಯನ್ನು ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಕರೆದುಕೊಂಡು ಹೋಗಲಾಗಿದೆ. ಈ ವೇಳೆ ಬಾಲಕಿಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆತಂಕಗೊಂಡ ಕುಟುಂಬದವರು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಘಟನೆಯ ಸತ್ಯಾಂಶ ತಿಳಿದ ಬಳಿಕ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಜಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!