2023ರ ಅಕ್ಟೋಬರ್ 7ರಂದು ನಡೆದ ದಾಳಿಯ ಬಳಿಕ ಹಮಾಸ್ ಸಂಘಟನೆಯ ವಶದಲ್ಲಿದ್ದ ಸೆರೆಯಾಳುಗಳ ಮೇಲೆ ಅಮಾನವೀಯ ಲೈಂಗಿಕ ದೌರ್ಜನ್ಯ ಹಾಗೂ ಚಿತ್ರಹಿಂಸೆ ನಡೆಸಲಾಗಿದೆ ಎಂಬ ಭೀಕರ ಸಂಗತಿಗಳನ್ನು ಇಸ್ರೇಲ್ ಬಿಡುಗಡೆ ಮಾಡಿದ ಸ್ವತಂತ್ರ ತನಿಖಾ ವರದಿ ಬಹಿರಂಗಪಡಿಸಿದೆ. ಸುಮಾರು 300 ಪುಟಗಳ ಈ ವರದಿಯನ್ನು 400ಕ್ಕೂ ಹೆಚ್ಚು ಸಾಕ್ಷ್ಯಾಧಾರಿತ ಸಂದರ್ಶನಗಳು ಮತ್ತು 10 ಸಾವಿರಕ್ಕೂ ಅಧಿಕ ಫೋಟೋ-ವೀಡಿಯೊಗಳ ವಿಶ್ಲೇಷಣೆಯ ಆಧಾರದಲ್ಲಿ ಸಿದ್ಧಪಡಿಸಲಾಗಿದೆ.
ಗಾಜಾದ ಸುರಂಗ ಮಾರ್ಗಗಳು ಹಾಗೂ ಹಮಾಸ್‌ನ ರಹಸ್ಯ ತಾಣಗಳಲ್ಲಿ ಕೈದಿಗಳನ್ನು ಕ್ರೂರವಾಗಿ ಹಿಂಸಿಸಲಾಗಿದೆ ಎಂದು ವರದಿ ತಿಳಿಸಿದೆ. ಕುಟುಂಬದ ಸದಸ್ಯರನ್ನೇ ಪರಸ್ಪರ ಲೈಂಗಿಕ ಕ್ರಿಯೆಗಳಲ್ಲಿ ತೊಡಗುವಂತೆ ಬಲವಂತಪಡಿಸುವಂತಹ ಅಮಾನವೀಯ ಕೃತ್ಯಗಳು ನಡೆದಿವೆ ಎಂಬ ಆಘಾತಕಾರಿ ಅಂಶಗಳು ಇದರಲ್ಲಿ ಉಲ್ಲೇಖಗೊಂಡಿವೆ.
ಮಹಿಳೆಯರಷ್ಟೇ ಅಲ್ಲದೆ ಪುರುಷರು ಹಾಗೂ ಮಕ್ಕಳ ಮೇಲೂ ಲೈಂಗಿಕ ಶೋಷಣೆ ನಡೆದಿರುವುದಾಗಿ ವರದಿ ಹೇಳಿದೆ. ಸಂತ್ರಸ್ತರನ್ನು ಸಾರ್ವಜನಿಕವಾಗಿ ನಗ್ನಗೊಳಿಸುವುದು, ದೇಹವನ್ನು ವಿರೂಪಗೊಳಿಸುವುದು ಹಾಗೂ ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಕ್ರೂರ ಹಿಂಸೆ ನೀಡಲಾಗಿದೆ ಎಂದು ತನಿಖಾ ತಂಡ ವಿವರಿಸಿದೆ.
ಇನ್ನೂ ಬೆಚ್ಚಿಬೀಳಿಸುವ ಸಂಗತಿಯೆಂದರೆ, ಮೃತಪಟ್ಟ ಮಹಿಳೆಯರ ಮೇಲೂ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪಗಳು ವರದಿಯಲ್ಲಿ ದಾಖಲಾಗಿವೆ. ಹಲವೆಡೆ ಒಳಉಡುಪುಗಳಿಲ್ಲದ ಹಾಗೂ ದೇಹದ ಅಂಗಾಂಗಗಳು ಹಾನಿಗೊಳಗಾದ ಸ್ಥಿತಿಯಲ್ಲಿ ಮಹಿಳೆಯರ ಮೃತದೇಹಗಳು ಪತ್ತೆಯಾಗಿದ್ದವು ಎಂದು ವರದಿ ಹೇಳಿದೆ.
ಡಾ. ಕೊಚಾವ್ ಎಲ್ಕಾಯಂ ಲೇವಿ ನೇತೃತ್ವದ ತನಿಖಾ ತಂಡವು, ಈ ಕೃತ್ಯಗಳು ಕೇವಲ ಹಿಂಸಾಚಾರವಲ್ಲ; ಯುದ್ಧಾಪರಾಧ, ಮಾನವೀಯತೆಯ ವಿರುದ್ಧದ ಅಪರಾಧ ಮತ್ತು ಜನಾಂಗೀಯ ಹತ್ಯೆಯ ಸ್ವರೂಪ ಹೊಂದಿವೆ ಎಂದು ಅಭಿಪ್ರಾಯಪಟ್ಟಿದೆ. ಸಂತ್ರಸ್ತರಿಗೆ ಗರಿಷ್ಠ ಮಾನಸಿಕ ಹಾಗೂ ದೈಹಿಕ ನೋವುಂಟುಮಾಡುವ ಉದ್ದೇಶದಿಂದಲೇ ಈ ಕೃತ್ಯಗಳನ್ನು ಯೋಜಿತವಾಗಿ ಎಸಗಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ, ವಿಶ್ವಸಂಸ್ಥೆಯ ವಿಶೇಷ ತನಿಖಾ ತಂಡವೂ ಕೈದಿಗಳ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದಿರುವುದಕ್ಕೆ ಸಮಂಜಸವಾದ ಆಧಾರಗಳಿವೆ ಎಂದು ಹೇಳಿದೆ. ಆದರೆ, ಹಮಾಸ್ ಸಂಘಟನೆಯು ಈ ಎಲ್ಲಾ ಆರೋಪಗಳನ್ನು ನಿರಾಕರಿಸುತ್ತಿದ್ದು, ತಮ್ಮ ವಶದಲ್ಲಿದ್ದ ಕೈದಿಗಳ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಪುನರುಚ್ಚರಿಸಿದೆ.
ಈ ವರದಿ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಯುದ್ಧಾಪರಾಧಗಳ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
