ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಮದರಸಾದ ಕಿರುಕುಳ ಸಹಿಸಲಾಗದೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ಬಿಹಾರ ಮೂಲದ 24 ಮಕ್ಕಳನ್ನು ರೈಲ್ವೆ ರಕ್ಷಣಾ ದಳ (RPF) ಬೆಂಗಳೂರು ರೈಲು ನಿಲ್ದಾಣದಲ್ಲಿ ರಕ್ಷಿಸಿದ್ದು, ಈ ವೇಳೆ ಮದರಸಾದ ಒಳಗಿನ ಕರಾಳ ಸತ್ಯ ಹೊರಬಿದ್ದಿದೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಲಾಪುರದಲ್ಲಿರುವ ‘ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್’ ಮದರಸಾದಲ್ಲಿ ಈ ಘಟನೆಗಳು ನಡೆದಿರುವುದಾಗಿ ತಿಳಿದುಬಂದಿದೆ. ಮದರಸಾದಿಂದ ಹೇಗೋ ತಪ್ಪಿಸಿಕೊಂಡು ಬೆಂಗಳೂರು ತಲುಪಿದ್ದ ಮಕ್ಕಳನ್ನು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದಾಗ, ಅವರು ಅನುಭವಿಸಿದ್ದ ಹಿಂಸೆ ಮತ್ತು ಕಿರುಕುಳದ ಭೀಕರ ವಿವರಗಳನ್ನು ಬಾಯ್ಬಿಟ್ಟಿದ್ದಾರೆ.
ಮಕ್ಕಳ ಹೇಳಿಕೆ ಪ್ರಕಾರ, ಮದರಸಾದ ಮೌಲ್ವಿ ಮೌಲಾಲಿ ಎಂಬಾತ ಮಕ್ಕಳನ್ನು ಬಲವಂತವಾಗಿ ದುಡಿಸಿಕೊಳ್ಳುತ್ತಿದ್ದನು. ಮಕ್ಕಳಿಂದ ಭಾರವಾದ ಕಲ್ಲುಗಳನ್ನು ಹೊರೆಸಲಾಗುತ್ತಿತ್ತು. ಕೆಲಸ ಮಾಡಲು ನಿರಾಕರಿಸಿದರೆ ಅಥವಾ ಸುಸ್ತಾಗಿ ಕುಳಿತರೆ ಕ್ರೂರವಾಗಿ ಹಲ್ಲೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇದಲ್ಲದೆ, ಮಕ್ಕಳಿಗೆ ಸಮರ್ಪಕ ಆಹಾರ ನೀಡದೆ ಉಪವಾಸ ಹಾಕಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ರೈಲ್ವೆ ಪೊಲೀಸರು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ (CWC) ವಶಕ್ಕೆ ಒಪ್ಪಿಸಿದ್ದರು. ಸಮಿತಿಯ ದೂರಿನ ಮೇರೆಗೆ ಮೊದಲು ಬೆಂಗಳೂರಿನಲ್ಲಿ ದಾಖಲಾಗಿದ್ದ ಶೂನ್ಯ ಎಫ್‌ಐಆರ್ ಅನ್ನು ಬಳಿಕ ತುಮಕೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.
ಆರೋಪಿ ಮೌಲ್ವಿ ಮೌಲಾಲಿ ವಿರುದ್ಧ ಬಾಲ ನ್ಯಾಯ ಕಾಯ್ದೆ ಹಾಗೂ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದ್ದು, ಮದರಸಾದ ಹೆಸರಿನಲ್ಲಿ ನಡೆಯುತ್ತಿದ್ದ ಈ ಶೋಷಣೆಯ ಪ್ರಕರಣ ಜಿಲ್ಲಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
