ಮುಂಬೈ: ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣ ಇದೀಗ ಆತಂಕಕಾರಿ ತಿರುವು ಪಡೆದಿದೆ. ಆರಂಭದಲ್ಲಿ ಆಹಾರ ವಿಷಬಾಧೆ ಎಂದು ಶಂಕಿಸಲಾಗಿದ್ದ ಈ ಪ್ರಕರಣದಲ್ಲಿ, ಕಲ್ಲಂಗಡಿ ಹಣ್ಣಿನಲ್ಲಿದ್ದ ಇಲಿ ಪಾಷಾಣವೇ ಸಾವಿಗೆ ಕಾರಣ ಎಂಬುದು ವಿಧಿವಿಜ್ಞಾನ ವರದಿಯಲ್ಲಿ ಬಹಿರಂಗವಾಗಿದೆ.

ಮೃತರಾದವರು ಅಬ್ದುಲ್ಲಾ ಡೊಕಾಡಿಯಾ (45), ಅವರ ಪತ್ನಿ ನಸ್ರೀನ್ (35) ಹಾಗೂ ಪುತ್ರಿಯರಾದ ಝೈನಬ್ (13) ಮತ್ತು ಆಯೇಷಾ (16). ಕುಟುಂಬದ ಈ ದಾರುಣ ಸಾವಿನ ಹಿಂದೆ ಜಿಂಕ್ ಫಾಸ್ಫೈಟ್ (Zinc Phosphide) ಎಂಬ ಅತ್ಯಂತ ಅಪಾಯಕಾರಿ ವಿಷಕಾರಿ ರಾಸಾಯನಿಕ ಇರುವುದನ್ನು ಫೊರೆನ್ಸಿಕ್ ಪರೀಕ್ಷೆ ದೃಢಪಡಿಸಿದೆ.

ಘಟನೆ ನಡೆದಿದ್ದು ಹೇಗೆ?

ಇತ್ತೀಚೆಗೆ ಅಬ್ದುಲ್ಲಾ ಕುಟುಂಬ ತಮ್ಮ ನಿವಾಸದಲ್ಲಿ ಸಂಬಂಧಿಕರಿಗಾಗಿ ಔತಣಕೂಟ ಏರ್ಪಡಿಸಿತ್ತು. ಎಲ್ಲರೂ ಮಟನ್ ಪಲಾವ್ ಸೇವಿಸಿ ತೆರಳಿದ ಬಳಿಕ, ರಾತ್ರಿ ಸುಮಾರು 1 ಗಂಟೆ ವೇಳೆಗೆ ಕುಟುಂಬದ ನಾಲ್ವರು ಕಲ್ಲಂಗಡಿ ಹಣ್ಣು ತಿಂದಿದ್ದರು. ಆದರೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಎಲ್ಲರಿಗೂ ತೀವ್ರ ವಾಂತಿ, ಭೇದಿ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ನಾಲ್ವರೂ ಮೃತಪಟ್ಟಿದ್ದರು.

ಈ ಘಟನೆ ನಂತರ ಮೃತರ ದೇಹದ ಮಾದರಿ ಹಾಗೂ ಅವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ಜಿಂಕ್ ಫಾಸ್ಫೈಡ್ ಅಂಶ ಪತ್ತೆಯಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಬೆಚ್ಚಿಬೀಳಿಸುವ ಸಂಗತಿ

ಮರಣೋತ್ತರ ಪರೀಕ್ಷೆಯ ವೇಳೆ ಮೃತರ ಮೆದುಳು, ಹೃದಯ ಹಾಗೂ ಕರುಳು ಸೇರಿದಂತೆ ಹಲವು ಒಳಾಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ಇದು ದೇಹದಲ್ಲಿ ತೀವ್ರ ಪ್ರಮಾಣದ ವಿಷಕಾರಿ ಅಂಶ ಸೇರಿರುವುದರ ಸೂಚಕ ಎಂದು ವೈದ್ಯರು ತಿಳಿಸಿದ್ದಾರೆ.

ಇದರ ಜೊತೆಗೆ ಅಬ್ದುಲ್ಲಾ ಡೊಕಾಡಿಯಾ ಅವರ ದೇಹದಲ್ಲಿ ‘ಮಾರ್ಫಿನ್’ ಅಂಶವೂ ಪತ್ತೆಯಾಗಿದೆ. ಅದು ವೈದ್ಯಕೀಯ ಚಿಕಿತ್ಸೆಗಾಗಿ ಬಳಸಲಾಗಿತ್ತೇ ಅಥವಾ ಪ್ರಕರಣದ ಹಿಂದೆ ಮತ್ತೇನಾದರೂ ಸಂಚು ಇದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಪೊಲೀಸರ ತನಿಖೆ ಚುರುಕು

ಔತಣಕೂಟದಲ್ಲಿ ಭಾಗವಹಿಸಿದ್ದ ಸಂಬಂಧಿಕರಿಗೆ ಯಾವುದೇ ತೊಂದರೆ ಆಗದ ಹಿನ್ನೆಲೆ, ಪೊಲೀಸರು ಕಲ್ಲಂಗಡಿ ಹಣ್ಣಿನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಹಣ್ಣಿಗೆ ವಿಷ ಆಕಸ್ಮಿಕವಾಗಿ ಸೇರಿತ್ತೇ ಅಥವಾ ಉದ್ದೇಶಪೂರ್ವಕವಾಗಿ ಇಂಜೆಕ್ಟ್ ಮಾಡಲಾಗಿತ್ತೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಸದ್ಯ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿವಿಜ್ಞಾನ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

error: Content is protected !!