ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ವೈಯಕ್ತಿಕ ಸಹಾಯಕ ಚಂದ್ರನಾಥ್ ಹತ್ಯೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಭದ್ರತಾ ಸಂಸ್ಥೆಗಳು ಮಹತ್ವದ ಸುಳಿವೊಂದನ್ನು ಪತ್ತೆಹಚ್ಚಿವೆ. ಈ ಹತ್ಯೆಗೆ ಬಳಸಲಾದ ವಿದೇಶಿ ಪಿಸ್ತೂಲ್‌ ಕುರಿತ ಮಾಹಿತಿ ತನಿಖೆಯನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಂಪರ್ಕದತ್ತ ಕೊಂಡೊಯ್ದಿದೆ.

ಮೂಲಗಳ ಪ್ರಕಾರ, ಚಂದ್ರನಾಥ್ ಅವರನ್ನು ಹತ್ಯೆ ಮಾಡಲು ಆಸ್ಟ್ರಿಯಾದಲ್ಲಿ ತಯಾರಾಗುವ ಗ್ಲಾಕ್ G43x ಅರೆ-ಸ್ವಯಂಚಾಲಿತ ಪಿಸ್ತೂಲ್ ಬಳಸಲಾಗಿದೆ. ಈ ಶಸ್ತ್ರಾಸ್ತ್ರದಿಂದ ಅವರ ಮೇಲೆ ಡಜನ್‌ಗಿಂತ ಹೆಚ್ಚು ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ. ಅವರ ನಿವಾಸದಿಂದ ಸುಮಾರು 200 ಮೀಟರ್ ದೂರದಲ್ಲಿ ನಡೆದ ದಾಳಿಯಲ್ಲಿ ಹಂತಕರು ತಲೆ, ಎದೆ ಮತ್ತು ಹೊಟ್ಟೆ ಭಾಗಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದ್ದಾರೆ. ಗಂಭೀರ ರಕ್ತಸ್ರಾವದಿಂದ ಚಂದ್ರನಾಥ್ ಸ್ಥಳದಲ್ಲೇ ಕುಸಿದುಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಭದ್ರತಾ ಸಿಬ್ಬಂದಿ ಕೆಲ ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಅವು ಗ್ಲಾಕ್ G43x ಪಿಸ್ತೂಲ್‌ಗೆ ಸೇರಿದ್ದವು ಎಂಬುದು ದೃಢಪಟ್ಟಿದೆ. ಈ ಪಿಸ್ತೂಲ್ ಭಾರತದಲ್ಲಿ ಸಾಮಾನ್ಯವಾಗಿ ಲಭ್ಯವಿಲ್ಲದ ದುಬಾರಿ ವಿದೇಶಿ ಶಸ್ತ್ರವಾಗಿದ್ದು, ಸಾಮಾನ್ಯ ಅಪರಾಧಿಗಳು ಇದನ್ನು ಸುಲಭವಾಗಿ ಪಡೆಯಲು ಸಾಧ್ಯವಿಲ್ಲ ಎಂದು ತನಿಖಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಈ ಹಿನ್ನೆಲೆ, ಹತ್ಯೆ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸಿರುವ ಶಂಕೆ ಗಟ್ಟಿಯಾಗುತ್ತಿದೆ. ವಿಶೇಷವಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ವಿದೇಶಿ ಪಿಸ್ತೂಲ್‌ಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿರುವ ಮಾಹಿತಿ ತನಿಖೆಗೆ ಮತ್ತಷ್ಟು ಗಂಭೀರತೆಯನ್ನು ತಂದಿದೆ.

ಭದ್ರತಾ ಮೂಲಗಳ ಪ್ರಕಾರ, ಕಳೆದ ಮಾರ್ಚ್ 26ರಂದು ಭಾರತ-ಪಾಕಿಸ್ತಾನ ಗಡಿಯ ಬಳಿ 10 ವಿದೇಶಿ ಪಿಸ್ತೂಲ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು. ಅವುಗಳಲ್ಲಿ ಟರ್ಕಿಯ ಜಿಗಾನಾ, ಅಮೆರಿಕದ ಬೆರೆಟ್ಟಾ, ಚೀನಾದ ನೊರಿಂಕೊ ಮತ್ತು ಆಸ್ಟ್ರಿಯಾದ ಗ್ಲಾಕ್ ಪಿಸ್ತೂಲ್‌ಗಳು ಸೇರಿದ್ದವು. ಈ ಪ್ರಕರಣದ ಬಳಿಕ ವಿದೇಶಿ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಜಾಲದ ಬಗ್ಗೆ ಅನುಮಾನಗಳು ಮತ್ತಷ್ಟು ಹೆಚ್ಚಾಗಿವೆ.

ಇದೀಗ ಚಂದ್ರನಾಥ್ ಹತ್ಯೆಯಲ್ಲಿ ಬಳಸಲಾದ ಗ್ಲಾಕ್ G43x ಪಿಸ್ತೂಲ್ ಭಾರತಕ್ಕೆ ಹೇಗೆ ತಲುಪಿತು ಎಂಬ ಪ್ರಶ್ನೆ ತನಿಖಾಧಿಕಾರಿಗಳನ್ನು ಕಾಡುತ್ತಿದೆ. ಪಂಜಾಬ್ ಗಡಿಯ ಮೂಲಕ ಇದನ್ನು ದೇಶಕ್ಕೆ ತರಲಾಗಿತ್ತೇ? ಅಥವಾ ಬಾಂಗ್ಲಾದೇಶ ಗಡಿಯ ಮೂಲಕ ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಯಿತೇ? ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಈ ದುಬಾರಿ ಶಸ್ತ್ರಾಸ್ತ್ರವನ್ನು ಯಾರು ಪೂರೈಸಿದರು, ಹಂತಕರಿಗೆ ಯಾರು ನೆರವಾದರು ಹಾಗೂ ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಜಾಲ ಯಾವುದು ಎಂಬುದರ ಕುರಿತು ಭದ್ರತಾ ಸಂಸ್ಥೆಗಳು ಆಳವಾದ ತನಿಖೆ ಆರಂಭಿಸಿವೆ.

ಚಂದ್ರನಾಥ್ ಹತ್ಯೆ ಪ್ರಕರಣ ಈಗ ಕೇವಲ ವೈಯಕ್ತಿಕ ದ್ವೇಷ ಅಥವಾ ಸಾಮಾನ್ಯ ಅಪರಾಧದ ಪ್ರಕರಣವಾಗಿರದೇ, ದೇಶದ ಭದ್ರತೆಗೆ ಸವಾಲೊಡ್ಡುವ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲದ ಸುಳಿವನ್ನೂ ಹೊರತರುತ್ತಿದೆ. ಹಂತಕರನ್ನು ಪತ್ತೆಹಚ್ಚುವ ಜೊತೆಗೆ, ಈ ಶಸ್ತ್ರಾಸ್ತ್ರ ಜಾಲದ ಬೇರುಗಳನ್ನು ಪತ್ತೆಹಚ್ಚಲು ಭದ್ರತಾ ಸಂಸ್ಥೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.

error: Content is protected !!