ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20 ದಿನಗಳ ಹಿಂದೆ ಲೈಂಗಿಕ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರು, ಮೊನ್ನೆ ಸಂಜೆ ಹಠಾತ್ ಅನಾರೋಗ್ಯಕ್ಕೊಳಗಾಗಿ ಇಂದು ಮೃತಪಟ್ಟಿದ್ದಾರೆ.

ಕುಶಾಲನಗರ ನಿವಾಸಿಯಾಗಿದ್ದ ಚೆಂಗಪ್ಪ ನಿವೃತ್ತ ಕಾರ್ಮಿಕ ಅಧಿಕಾರಿ ಆಗಿದ್ದು, ಅವರ ವಿರುದ್ಧ ಸುಳ್ಳು ದೂರು ದಾಖಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಸಮಗ್ರ ತನಿಖೆ ನಡೆಸದೇ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರಿಂದ ಮಾನಸಿಕ ಆಘಾತಕ್ಕೊಳಗಾಗಿ ಅವರು ಮೃತಪಟ್ಟಿದ್ದಾರೆ ಎಂದು ಸಹೋದರ ಬೆಳ್ಳಿ ಪ್ರಕಾಶ್ ತಿಳಿಸಿದ್ದಾರೆ.

ಒಂಟಿಯಾಗಿ ವಾಸ ಮಾಡುತ್ತಿದ್ದ ಚೆಂಗಪ್ಪ, ಕಂಪೆನಿಯೊಂದರ ಮೂಲಕ ಮಹಿಳೆಯೊಬ್ಬರನ್ನು ಕೇರ್ ಟೇಕರ್ ಆಗಿ ನೇಮಿಸಿಕೊಂಡಿದ್ದರು. ಆದರೆ ಅದೇ ಮಹಿಳೆ ಹನಿಟ್ರ್ಯಾಪ್ ಮೂಲಕ ಅವರನ್ನು ಬ್ಲಾಕ್‌ಮೇಲ್ ಮಾಡಿದ್ದಾಳೆ ಎಂಬ ಗಂಭೀರ ಆರೋಪವನ್ನು ಕುಟುಂಬದವರು ಮಾಡಿದ್ದಾರೆ.

ಆ ಮಹಿಳೆಯೇ ಚೆಂಗಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಆರೋಪದಡಿ ದೂರು ನೀಡಿದ್ದಳು. ದೂರು ಆಧರಿಸಿ ಕುಶಾಲನಗರ ಗ್ರಾಮಾಂತರ ಪೊಲೀಸರು ಚೆಂಗಪ್ಪ ಅವರನ್ನು ವಿಚಾರಣೆಗೆ ಕರೆಸಿ ಬಂಧಿಸಿದ್ದರು. ಆದರೆ ಅವರು ಮತ್ತೆ ಮನೆಗೆ ಮರಳದೇ ಜೈಲಿಗೇ ಹೋಗಿ, ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಸಾವನ್ನಪ್ಪಿದ್ದಾರೆ.

ಕುಟುಂಬದವರ ಪ್ರಕಾರ, ಆ ಮಹಿಳೆ ಇದೇ ರೀತಿಯಲ್ಲಿ ಇನ್ನೂ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ ಮತ್ತು ವಿಶೇಷವಾಗಿ ಒಂಟಿ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದಾಳೆ ಎನ್ನಲಾಗಿದೆ. ಇದಲ್ಲದೆ, ಜಾಮೀನು ಕೊಡಿಸುವುದಾಗಿ ಹೇಳಿ ವಕೀಲರೊಬ್ಬರು ಚೆಂಗಪ್ಪರಿಂದ ಲಕ್ಷಾಂತರ ರೂಪಾಯಿ ಪಡೆದು ಮೋಸ ಮಾಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಚೆಂಗಪ್ಪ ಅವರ ಮೊಬೈಲ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಣ ದುರುಪಯೋಗ ಮಾಡಲಾಗಿದೆ. ಅವರ ಖಾತೆಯಿಂದ ಹಣ ತೆಗೆದು ಬೈಕ್ ಖರೀದಿ ಮಾಡಿದ್ದು, ಇನ್ನಿತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಕುಟುಂಬದವರು ದೂರಿದ್ದಾರೆ. ಈ ವಿಚಾರ ತಿಳಿದು ಕುಟುಂಬವು ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸಿದೆ.

ಈ ಎಲ್ಲಾ ಆರೋಪಗಳ ಹಿನ್ನೆಲೆ, ಚೆಂಗಪ್ಪ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಸಮಗ್ರ ತನಿಖೆಗೆ ಒತ್ತಾಯ ಕೇಳಿಬಂದಿದೆ.

Related News

error: Content is protected !!