ಶಿರಸಿ: ನಗರದ ಕೆಎಚ್‌ಬಿ ಕಾಲೋನಿ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಖ್ಯಾತ ಆಯುರ್ವೇದ ವೈದ್ಯರಾದ ಡಾ. ರಮೇಶ್ ಎಫ್. ಕಲ್ಗುಟ್ಕರ್ ಅವರನ್ನು ಅಜ್ಞಾತ ವ್ಯಕ್ತಿಗಳು ಕ್ರೂರವಾಗಿ ಹತ್ಯೆಗೈದಿರುವುದು ಪತ್ತೆಯಾಗಿದೆ.

ಇಂದು ಬೆಳಿಗ್ಗೆ ಸಂಬಂಧಿಕರು ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ, ವೈದ್ಯರು ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಭೀತಿಯ ವಾತಾವರಣವನ್ನು ಉಂಟುಮಾಡಿದೆ.

ಡಾ. ರಮೇಶ್ ಅವರು ಹುಬ್ಬಳ್ಳಿ ರಸ್ತೆಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿದ್ದು, ಸಮಾಜದಲ್ಲಿ ಉತ್ತಮ ಹೆಸರು ಗಳಿಸಿದ್ದರು. ಗಮನಾರ್ಹ ಸಂಗತಿಯೆಂದರೆ, ಸುಮಾರು ಆರು ತಿಂಗಳ ಹಿಂದೆ ಅವರ ಪತ್ನಿ ನಿಧನ ಹೊಂದಿದ್ದು, ಇತ್ತೀಚೆಗೆ ಅವರು ಮರು ವಿವಾಹಕ್ಕೆ ಸಿದ್ಧರಾಗಿದ್ದರು. ನಾಳೆ (ಸೋಮವಾರ) ತಾಲೂಕಿನ ಮಂಜುಗುಣಿಯಲ್ಲಿ ಅವರ ವಿವಾಹ ನಡೆಯಬೇಕಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಸಂಶಯಾಸ್ಪದವಾಗಿದ್ದು, ಹತ್ಯೆಗೆ ವೈಯಕ್ತಿಕ ಕಾರಣಗಳಿವೆಯೇ ಅಥವಾ ಬೇರೆ ಯಾವುದೇ ಅಂಶಗಳಿವೆಯೇ ಎಂಬುದನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲಿಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗೀತಾ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related News

error: Content is protected !!