ಕೊಪ್ಪಳ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಮುಸ್ತಫಾ ಖಾದ್ರಿ ವಿರುದ್ಧದ ‘ಲವ್ ಜಿಹಾದ್’ ಆರೋಪ ಪ್ರಕರಣದಲ್ಲಿ ಇದೀಗ ಮತ್ತೊಂದು ಹೊಸ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಮುಸ್ತಫಾ ಖಾದ್ರಿ ಯುವತಿಯನ್ನು ಬಲವಂತವಾಗಿ ಪ್ರೀತಿಸಲು ಮತ್ತು ಮದುವೆಯಾಗಲು ಒತ್ತಾಯಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಬೈಕ್ ಮೇಲೆ ಕುಳಿತುಕೊಂಡು ಯುವತಿಯೊಂದಿಗೆ ವಾಗ್ವಾದ ನಡೆಸುತ್ತಿರುವ ಆತ, “ಇಷ್ಟು ದಿನ ಮಾತಾಡಿದ್ದು, ಪ್ರೀತಿ ಮಾಡಿದ್ದು ಏಕೆ? ಈಗ ಯಾಕೆ ನನ್ನನ್ನು ಪ್ರೀತಿಸಲ್ಲ, ಮದುವೆಯಾಗಲ್ಲ ಅಂತೀಯಾ?” ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಇದೇ ವೇಳೆ, ಯುವತಿ ಮತ್ತೊಬ್ಬರೊಂದಿಗೆ ಮಾತನಾಡುತ್ತಿರುವುದರ ಬಗ್ಗೆ ಮುಸ್ತಫಾ ಪ್ರಶ್ನಿಸಿ, ಆಕೆಯ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಕೂಡ ಗೋಚರಿಸುತ್ತದೆ. ಆದರೆ, ಮುಸ್ತಫಾದ ಒತ್ತಡಕ್ಕೆ ಮಣಿಯದ ಯುವತಿ, “ನಿನ್ನ ಬಗ್ಗೆ ಈಗ ನನಗೆ ಸಂಪೂರ್ಣವಾಗಿ ಅರ್ಥವಾಗಿದೆ. ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ. ನನ್ನನ್ನು ಪ್ರಶ್ನಿಸುವ ಹಕ್ಕು ನಿನಗಿಲ್ಲ” ಎಂದು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾಳೆ.

ಈ ಘಟನೆಯ ವೇಳೆ ಮುಸ್ತಫಾ ತನ್ನ ಮೊಬೈಲ್‌ನಲ್ಲಿ ಸ್ವತಃ ವಿಡಿಯೋ ಚಿತ್ರೀಕರಿಸಿಕೊಂಡಿದ್ದು, “ಈ ವಿಡಿಯೋ ಮುಂದೆ ಬೇಕಾಗುತ್ತೆ, ಮಾತಾಡು” ಎಂದು ಹೇಳಿರುವುದು ಆತ ಯುವತಿಯನ್ನು ಬ್ಲಾಕ್‌ಮೇಲ್ ಮಾಡಲು ಪೂರ್ವ ಯೋಜನೆ ರೂಪಿಸಿದ್ದಾನೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಇದರ ಜೊತೆಗೆ, ಮುಸ್ತಫಾ ಮೊಬೈಲ್‌ನಲ್ಲಿ ಈಗಾಗಲೇ ಸಾವಿರಾರು ವಿಡಿಯೋಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದ್ದು, ಇಷ್ಟೊಂದು ಸಾಕ್ಷ್ಯಗಳಿದ್ದರೂ ಪೊಲೀಸರು ಇನ್ನೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Related News

error: Content is protected !!