ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಉಂಟಾದ ವೈಷಮ್ಯದಿಂದ ಈ ಘಟನೆ ನಡೆದಿತ್ತು. ಹನುಮಂತಮ್ಮ (ತಾಯಿ ಹುಲಿಗೆಮ್ಮ ಹೊಸಮನಿ) ಅವರ ಕುಟುಂಬದವರೊಂದಿಗೆ ಆರೋಪಿತರ ನಡುವೆ ದ್ವೇಷ ಉಂಟಾಗಿತ್ತು. 2021ರಲ್ಲಿ ಹನುಮಂತಮ್ಮ ಹಾಗೂ ಅವರ ಮಕ್ಕಳು ಶರಣಬಸವ ಮತ್ತು ಅಮರೇಶ ಮನೆಯ ಮುಂದೆ ಇದ್ದಾಗ, ಆರೋಪಿತರು ಅಕ್ರಮಕೂಟ ರಚಿಸಿ ಕಟ್ಟಿಗೆ, ಕೊಡಲಿ ಹಾಗೂ ಕಲ್ಲುಗಳೊಂದಿಗೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ದಾಳಿಯಲ್ಲಿ ಶರಣಬಸವ ಅವರಿಗೆ ಗಂಭೀರ ಗಾಯಗಳಾಗಿದ್ದು, ಲಿಂಗಸಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ. ಹನುಮಂತಮ್ಮ ಅವರ ದೂರಿನ ಮೇರೆಗೆ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಅಂದಿನ ಸಿಪಿಐ ಮಹಾಂತೇಶ ಸಜ್ಜನ ಮತ್ತು ರಮೇಶ ಕುಲ್ಕರ್ಣಿ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ರಾಯಚೂರು 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಲಿಂಗಸಗೂರು ಪೀಠ)ದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಆರೋಪಿಗಳನ್ನು ದೋಷಿ ಎಂದು ತೀರ್ಮಾನಿಸಿ, ಎಲ್ಲಾ 10 ಮಂದಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ ₹19,500 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಂಜುನಾಥ ಬೇರ್ಗಿ (ಹುಳ್ಕಿಹಾಳ್) ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಸಾಕ್ಷಿದಾರರನ್ನು ಸಮಯಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಪೊಲೀಸ್ ಪೇದೆಗಳಾದ ನಿಂಗಯ್ಯ ಮತ್ತು ಮಂಜುನಾಥ ಸಹಕಾರ ನೀಡಿದರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
