ಭಟ್ಕಳ: ತಾಲೂಕಿನ ತಲಗೇರಿ ಸಮೀಪದ ಜಾಲಿ–ವಿವೇಕಾನಂದ ನಗರ ಪ್ರದೇಶದಲ್ಲಿ ಶನಿವಾರ ತಡರಾತ್ರಿ ನಡೆದ ಗೋವು ಕಳ್ಳತನ ಯತ್ನ ಗ್ರಾಮಸ್ಥರ ಎಚ್ಚರಿಕೆಯಿಂದ ವಿಫಲಗೊಂಡಿದೆ. ಆದರೆ ಆರೋಪಿಗಳು ವಾಹನಗಳು ಹಾಗೂ ಮೊಬೈಲ್ಗಳನ್ನು ಬಿಟ್ಟು ಕತ್ತಲಲ್ಲಿ ಪರಾರಿಯಾಗಿರುವುದು ಘಟನೆಗೆ ನಾಟಕೀಯ ತಿರುವು ನೀಡಿದೆ.
ಮಧ್ಯರಾತ್ರಿ ಸುಮಾರು 3.45ರ ವೇಳೆಗೆ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಕಳ್ಳರು ಗೋವನ್ನು ಕದ್ದೊಯ್ಯಲು ಯತ್ನಿಸುತ್ತಿದ್ದರು. ಈ ವೇಳೆ ಗೋವುಗಳ ಕೂಗು ಕೇಳಿ ಅನುಮಾನಗೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ವಾಹನವನ್ನು ಸುತ್ತುವರೆದರು. ಸಿಕ್ಕಿಬೀಳುವ ಭೀತಿಯಿಂದ ಆರೋಪಿಗಳು ಕಾರು ಹಾಗೂ ಮೊಬೈಲ್ ಫೋನ್ಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಪರಾರಿಯಾದ ಕಳ್ಳರು ಸಮೀಪದ ಅರಣ್ಯ ಪ್ರದೇಶದಲ್ಲಿ ಅಡಗಿ, ಮತ್ತೊಂದು ಮೊಬೈಲ್ ಮೂಲಕ ತಮ್ಮ ಸಹಚರರನ್ನು ಕರೆಸಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ. ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಗ್ರಾಮಸ್ಥರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ, ಆರೋಪಿಗಳು ತಂದಿದ್ದ ಸುಜುಕಿ ಆಕ್ಸೆಸ್ ಸ್ಕೂಟರ್ನ್ನೂ ಬಿಟ್ಟು ಮತ್ತೆ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ.
ಪೊಲೀಸರು ಸ್ಥಳದಿಂದ ಸ್ವಿಫ್ಟ್ ಕಾರು, ಸುಜುಕಿ ಆಕ್ಸೆಸ್ ಸ್ಕೂಟರ್, ಮೊಬೈಲ್ ಫೋನ್ಗಳು ಹಾಗೂ ಕದ್ದೊಯ್ಯಲು ಯತ್ನಿಸಿದ್ದ ಗೋವು ಮತ್ತು ಕರುವನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯಲ್ಲಿ ಕಳ್ಳರು ನಕಲಿ ನಂಬರ್ ಪ್ಲೇಟ್ ಬಳಸಿ ತಮ್ಮ ಗುರುತನ್ನು ಮರೆಮಾಚಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಗೋವು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿ: ಕುಮಾರ್ ನಾಯ್ಕ್
