ತುಮಕೂರು ನಗರದ ಬನಶಂಕರಿ ಪ್ರದೇಶದಲ್ಲಿ ಕೌಟುಂಬಿಕ ಕಲಹ ಭೀಕರ ರೂಪ ತಾಳಿದ್ದು, ಯುವಕನೊಬ್ಬ ಅಣ್ಣನ ಕೈಯಲ್ಲಿ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ತಂದೆಯೂ ಸಾಥ್ ನೀಡಿದ್ದಾನೆ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಸ್ಟಾಲಿನ್ (29) ಮೃತನಾಗಿದ್ದು, ಆತನ ಅಣ್ಣ ನವೀನ್ ಹಾಗೂ ತಂದೆ ಜಾನ್ ಪಾಲ್ ಆರೋಪಿಗಳಾಗಿದ್ದಾರೆ. ಘಟನೆಯು ಮಾರ್ಚ್ 22ರಂದು ನಡೆದಿದ್ದರೂ, ತಡವಾಗಿ ಬಹಿರಂಗವಾಗಿದೆ.

ಮೂಲಗಳ ಪ್ರಕಾರ, ಸ್ಟಾಲಿನ್‌ಗೆ ಜನಿಫರ್ ಎಂಬ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮುನ್ನ, ಸ್ಟಾಲಿನ್ ಹಾಗೂ ಆತನ ಅತ್ತಿಗೆ (ಅಣ್ಣನ ಪತ್ನಿ) ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯವಾಗಿ ಕುಟುಂಬದಲ್ಲಿ ಕಳೆದ ಒಂದು ವಾರದಿಂದ ತೀವ್ರ ಗಲಾಟೆ ನಡೆಯುತ್ತಿತ್ತು.

ಈ ಗಲಾಟೆ ವಿಕೋಪಕ್ಕೆ ತಲುಪಿದ ಪರಿಣಾಮ, ಮಾರ್ಚ್ 22ರಂದು ನವೀನ್ ತನ್ನ ತಮ್ಮ ಸ್ಟಾಲಿನ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಈ ಘಟನೆ ಮುಚ್ಚಿಹಾಕಲು ತಂದೆ-ಮಗ ಸೇರಿ ಯತ್ನಿಸಿದ್ದರು.

ಸ್ಟಾಲಿನ್ ಗಾಯಗೊಂಡಿರುವುದನ್ನು ಬೈಕ್ ನಿಲ್ಲಿಸುವಾಗ ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ಆಸ್ಪತ್ರೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸಿದಾಗ ಗಾಯದ ಸ್ವರೂಪದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ತನಿಖೆ ತೀವ್ರಗೊಳಿಸಿದ ವೇಳೆ ತಂದೆ ಜಾನ್ ಪಾಲ್ ಮೊದಲಿಗೆ ತಪ್ಪು ಮಾಹಿತಿ ನೀಡಿದರೂ, ಬಳಿಕ ಸತ್ಯ ಬಹಿರಂಗಪಡಿಸಿದ್ದು, ಕೊಲೆ ರಹಸ್ಯ ಬಯಲಾಗಿದೆ.

ಪ್ರಸ್ತುತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related News

error: Content is protected !!