ಲಂಡನ್‌: ಪಾಕಿಸ್ತಾನ ಕ್ರಿಕೆಟ್ ಲೋಕವನ್ನು ನಾಚಿಕೆಗೀಡಾಗಿಸಿದ ಗಂಭೀರ ಘಟನೆ ಇಂಗ್ಲೆಂಡ್‌ನಲ್ಲಿ ಬೆಳಕಿಗೆ ಬಂದಿದೆ. ಇಂಗ್ಲೆಂಡ್ ಪ್ರವಾಸದಲ್ಲಿದ್ದ ಪಾಕಿಸ್ತಾನ ಎ ತಂಡದ ಕ್ರಿಕೆಟಿಗ ಹೈದರ್ ಅಲಿ (24) ಅವರನ್ನು ಅತ್ಯಾಚಾರ ಆರೋಪದ ಮೇಲೆ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್‌ 4, 2025ರಂದು ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದಾರೆ. ಜಾಮೀನು ಮಂಜೂರಾದರೂ, ತನಿಖೆ ಪೂರ್ಣಗೊಳ್ಳುವವರೆಗೆ ದೇಶ ಬಿಟ್ಟು ಹೋಗಬಾರದು ಎಂಬ ಷರತ್ತಿನಡಿ ಅವರ ಪಾಸ್ಪೋರ್ಟ್‌ ಮುಟ್ಟುಗೋಲು ಹಾಕಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹೈದರ್‌ ಅಲಿಯನ್ನು ತಕ್ಷಣವೇ ಅಮಾನತು ಮಾಡಿದೆ. ಅವರು ಪಾಕಿಸ್ತಾನ ಎ ತಂಡದೊಂದಿಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಗಾಗಿ ಬಂದಿದ್ದರು.

ಬೆಕೆನ್ಹ್ಯಾಮ್ ಮೈದಾನದಲ್ಲಿ ಪಂದ್ಯಾವಳಿ ನಡೆಯುತ್ತಿದ್ದ ವೇಳೆ, ಅಲಿಯನ್ನು ಪೊಲೀಸರು ಬಂಧಿಸಿದರು. ಇದೇ ಮೈದಾನದಲ್ಲಿ ಭಾರತೀಯ ಕ್ರಿಕೆಟ್ ತಂಡವೂ ಇತ್ತೀಚೆಗೆ ಅಭ್ಯಾಸ ನಡೆಸಿತ್ತು.

ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ, “ಆಗಸ್ಟ್‌ 4 ರಂದು ಅತ್ಯಾಚಾರದ ದೂರು ಸ್ವೀಕರಿಸಿದ ನಂತರ, 24 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ” ಎಂದು ತಿಳಿಸಿದರು.

ಈ ಘಟನೆ ಪಾಕಿಸ್ತಾನ ಕ್ರಿಕೆಟ್‌ಗೆ ಮತ್ತೊಂದು ವಿವಾದವನ್ನು ತಂದಿದ್ದು, ಅಭಿಮಾನಿಗಳು ಹಾಗೂ ಕ್ರಿಕೆಟ್ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Related News

error: Content is protected !!