ಮಂಗಳೂರು: ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಧರ್ಮಸ್ಥಳ ಶವ ಹೂತು ಪ್ರಕರಣವು ಇದೀಗ ಹೊಸ ಹಂತಕ್ಕೆ ಕಾಲಿಡುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ್ದು, ಈ ತಂಡ ನಾಳೆ (ಜುಲೈ 23) ಧರ್ಮಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಚಾಲನೆ ನೀಡಲಿದೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದ ಈ ವಿಶೇಷ ತಂಡ, ಮೊದಲಿಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಿದೆ. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಧರ್ಮಸ್ಥಳ ಠಾಣೆಯ ಇನ್ಸ್ಪೆಕ್ಟರ್ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಪ್ರಕರಣದ ನಿಖರ ವಿವರಗಳನ್ನು ಪಡೆಯಲಿದ್ದಾರೆ.
ನಂತರ ಈ ಪ್ರಕರಣವನ್ನು ಅಧಿಕೃತವಾಗಿ ಎಸ್ಐಟಿಗೆ ಹಸ್ತಾಂತರಿಸಲಾಗುತ್ತದೆ. ಈ ಮೂಲಕ, ಶವಗಳನ್ನು ಹೂತಿಟ್ಟಿದ್ದ ಶಂಕಿತ ಪ್ರಕರಣದ ಹಿನ್ನೆಲೆ, ಸಂಬಂಧಿತ ವ್ಯಕ್ತಿಗಳು ಹಾಗೂ ಹಿಂದಿನ ಎಲ್ಲ ವಿವರಗಳ ಬಗ್ಗೆ ಎಸ್ಐಟಿ ಸಂಪೂರ್ಣ ತನಿಖೆ ನಡೆಸಲಿದೆ.
ರಾಜ್ಯ ಸರ್ಕಾರದ ಈ ಕ್ರಮದಿಂದ ಪ್ರಕರಣದ ವಾಸ್ತವ ಸ್ಥಿತಿ ಬೆಳಕಿಗೆ ಬರುವ ನಿರೀಕ್ಷೆಯಿದೆ. ಸಾರ್ವಜನಿಕರ ಕುತೂಹಲಕ್ಕೂ ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟತೆ ದೊರೆಯುವ ಸಾಧ್ಯತೆ ಇದೆ.
