ಬೆಂಗಳೂರು ನಗರದಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, 22 ವರ್ಷದ ಅರ್ಚಿಟೆಕ್ಚರ್ ವಿದ್ಯಾರ್ಥಿ ಅರುಣ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಶೋಕ ಸಾದಗಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ರ್ಯಾಗಿಂಗ್ ಭೀತಿಯಿಂದ ವಿದ್ಯಾರ್ಥಿ ಈ ಕೃತ್ಯ ಎಸಗಿದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಹಾಸನ ಜಿಲ್ಲೆ ಮೂಲದ ಚನ್ನಕೇಶವ ಮತ್ತು ತುಳಸಿ ದಂಪತಿಯ ಪುತ್ರನಾದ ಅರುಣ್, ಬೆಂಗಳೂರಿನ ಬಾಗಲೂರಿನ ಪ್ರತಿಷ್ಠಿತ ಆರ್ಕಿಟೆಕ್ಚರ್ ಕಾಲೇಜಿನಲ್ಲಿ ಉಚಿತ ಸೀಟ್ ಪಡೆಯುವ ಮೂಲಕ ವ್ಯಾಸಂಗ ಮಾಡುತ್ತಿದ್ದರು. ವಿದ್ಯಾಭ್ಯಾಸದಲ್ಲಿ ಮೇಲುಗೈ ಸಾಧಿಸಿದ್ದ ಅರುಣ್, ತನ್ನ ಸಾಧನೆಗಾಗಿ ಕಾಲೇಜಿನಲ್ಲಿ ಟಾಪರ್‌ನಾಗಿದ್ದಾನೆ. ಕುಟುಂಬದ ಆರ್ಥಿಕ ಹಿನ್ನಲೆಯಲ್ಲಿ ಕೂಲಿ ಕೆಲಸ ಮಾಡುವ ಪೋಷಕರು ಮಗನ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯಿಂದ ಸಹಕಾರ ನೀಡಿದ್ದರು.
ಜುಲೈ 10ರಂದು ಅರುಣ್ ತನ್ನ ಗೃಹಕ್ಕೆ ಬಂದು, ಜುಲೈ 11ರಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮೊದಲು, ತನ್ನ ಮೇಲೆ ನಡೆದಿದ್ದ ರ್ಯಾಗಿಂಗ್ ಕುರಿತು ವಿಡಿಯೋ ಸಂದೇಶವೊಂದನ್ನು ಸೆಲ್ಫಿಯಾಗಿ ಮಾಡಿದ್ದಾನೆ. ಈ ವಿಡಿಯೋ ನಂತರವೇ ಆತನ ಆತ್ಮಹತ್ಯೆ ಬೆಳಕಿಗೆ ಬಂದಿದೆ.
ಅರುಣ್ ಮಾಡಿದ ಸೆಲ್ಫಿ ವೀಡಿಯೋ, ಕಾಲೇಜಿನ ವಾಟ್ಸಾಪ್ ಗ್ರೂಪ್‌ನಲ್ಲಿ ವೈರಲ್ ಆಗಿದ್ದು, ವಿಷಯ ತಿಳಿಯುತ್ತಿದ್ದಂತೇ ಕಾಲೇಜು ಆಡಳಿತಮಂಡಳಿ ಪೋಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ರು. ಆದರೆ ಮನೆಗೆ ಪೋಷಕರು ಬಂದಾಗ, ಅರುಣ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿದೆಯಾ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ವಿದ್ಯಾರ್ಥಿಯ ಮರಣದಿಂದ ಕುಟುಂಬ ಹಾಗೂ ಶೈಕ್ಷಣಿಕ ವಲಯದಲ್ಲಿ ದುಗುಡ ಮೂಡಿದೆ.
ವಿದ್ಯಾರ್ಥಿ ಆತ್ಮಹತ್ಯೆಗೆ ಕಾರಣವಾದವರು ಯಾರಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
