ಧಾರವಾಡ: ಗಾಂಜಾ ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿದ್ದ ಮೂವರು ಶಂಕಿತರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಧಾರವಾಡ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ನೀಲಗಿರಿ ತೋಪು ಪ್ರದೇಶದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಬೆಳಗಾವಿಗೆ ಸೇರಿದ ಮಶಾಹಿದುಲ್ಲಾ, ಅನುರಾಗ ನಾಯಕ್ ಮತ್ತು ಅಸ್ನಾನ್ ದೇಸಾಯಿ ಎಂದು ಗುರುತಿಸಲಾಗಿದೆ. ಆರೋಪಿಗಳು ಟವೇರಾ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಲಭಿಸಿದ್ದ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿ ಬಂಧಿಸಲಾಗಿದೆ.
ಪೊಲೀಸರ ಸೂಚನೆಯಂತೆ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, 1 ಕಿಲೊ 263 ಗ್ರಾಂ ತೂಕದ ಗಾಂಜಾ, 2 ಮೊಬೈಲ್ ಫೋನ್ಗಳು ಹಾಗೂ ಒಂದು ಟವೇರಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮೌಲ್ಯವನ್ನು ಅಂದಾಜು ₹25,000 ಎಂದು ತಿಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದ್ದು, ಗಾಂಜಾ ಮೂಲವೇನು? ಇದರ ಹಿಂದೆ ಇನ್ನು ಯಾರವರ ಕೈವಾಡವಿದೆಯೇ ಎಂಬುದರ ಬಗ್ಗೆ ಗಂಭೀರ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
