ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಿ.ಎಸ್. ಶುಭಲಕ್ಷ್ಮಿಯವರನ್ನು ಕರ್ತವ್ಯ ಲೋಪ ಮತ್ತು ಹಣ ದುರುಪಯೋಗ ಆರೋಪದ ಮೇಲೆ ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಅವರು ಆದೇಶ ಹೊರಡಿಸಿದ್ದಾರೆ.
ಶುಭಲಕ್ಷ್ಮಿಯವರು ಪ್ರಸ್ತುತ ಕುಂಕಾನಾಡು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ವಿರುದ್ಧ ಕುಂಕಾನಾಡು ಗ್ರಾಮದ ಆರ್. ಮಂಜುನಾಥ್ ಎಂಬುವವರು ನೀಡಿದ್ದ ದೂರು ಅನ್ವಯ ತನಿಖೆ ಕೈಗೊಳ್ಳಲಾಗಿತ್ತು.
ತಕ್ಷಣದ ಹಿಂದೆ ಅವರು ಪುರ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, 2023–24ನೇ ಸಾಲಿನಲ್ಲಿ ವರ್ಗ-1 ನಡವಳಿ ಖಾತೆಯಿಂದ ₹4.62 ಲಕ್ಷ ಮೊತ್ತವನ್ನು ನೀರುಗಂಟಿಗಳ ಖರೀದಿಗೆ ನಿಯಮ ಉಲ್ಲಂಘನೆಯಿಂದ ಚೆಕ್ ಮೂಲಕ ಪಾವತಿಸಿದ್ದಾಗಿ ಆರೋಪವಾಗಿದೆ. ಅಲ್ಲದೆ, ಚುನಾವಣಾ ವೆಚ್ಚದ ಹಣ ಪಾವತಿಸಿದರೂ ಅದರ ರಶೀದಿಗೆ ಸಹಿ ಪಡೆಯದೆ, ಖರೀದಿ ದಾಖಲಾತಿ, ಸಾಮಗ್ರಿಗಳ ಸಂಗ್ರಹ ಮತ್ತು ವಿತರಣೆ ದಾಖಲೆಯನ್ನೂ ಸೂಕ್ತವಾಗಿ ನಿರ್ವಹಿಸಿಲ್ಲ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಈ ಎಲ್ಲಾ ಅನಿಯಮಿತತೆಗಳನ್ನು ಗಮನಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗೆ ವರದಿ ಸಲ್ಲಿಸಿದ್ದು, ಮುಂದಿನ ತನಿಖೆಗೆ ಪಿಡಿಒ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಅನ್ವಯ, ಬಿ.ಎಸ್. ಶುಭಲಕ್ಷ್ಮಿಯವರನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತುಗೊಳಿಸಿ ಕ್ರಮ ಜರುಗಿಸಲಾಗಿದೆ.
