
ರಾಯಚೂರು: ಸಿಂಧನೂರಿನ ಸಿ.ಎಸ್.ಎಫ್ ಕ್ಯಾಂಪ್ ಪ್ರದೇಶದಲ್ಲಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಪ್ರಕರಣವೊಂದು ಶಂಕೆಮೂಡಿಸಿದೆ. 26 ವರ್ಷದ ಮಾಬಮ್ಮ ಎಂಬ ಯುವತಿ ಮೃತಪಟ್ಟವರಾಗಿದ್ದು, ಇದು ಆತ್ಮಹತ್ಯೆ ಅಲ್ಲ, ವರದಕ್ಷಿಣೆ ಪೀಡನೆಯ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಮಾಬಮ್ಮ ಅವರು ನಾಲ್ಕು ವರ್ಷಗಳ ಹಿಂದೆ ಹುಸೇನಬಾಷ ಎಂಬಾತನೊಂದಿಗೆ ವಿವಾಹವಾಗಿದ್ದರು. ಆದರೂ, ವಿವಾಹದ ಕೆಲ ತಿಂಗಳ ನಂತರದಿಂದಲೇ ಪತಿ ಮತ್ತು ಅವರ ಮನೆಯವರು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರೆಂದು ಕುಟುಂಬದವರು ತಿಳಿಸಿದ್ದಾರೆ. ಪ್ರತಿದಿನವೂ ವರದಕ್ಷಿಣೆ ತರುವಂತೆ ಒತ್ತಡ ಹಾಗೂ ಜಗಳ ನಡೆಯುತ್ತಿದ್ದದಾಗಿ ಕುಟುಂಬಸ್ಥರು ದೂರಿದ್ದಾರೆ.
ಇದೀಗ ಮಾಬಮ್ಮ ಶವವಾಗಿ ಪತ್ತೆಯಾಗಿದ್ದು, ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ದೊರೆತಿದೆ. ಆದರೆ ಮೃತದೇಹದ ಸ್ಥಿತಿ ಹಾಗೂ ಹಿಂದಿನ ಹಿನ್ನಲೆಯಲ್ಲಿ ಇದು ಪ್ಲಾನ್ ಮಾಡಿದ ಕೊಲೆ ಎಂದು ಶಂಕಿಸಲಾಗಿದೆ. ಮಾಬಮ್ಮ ತಂದೆ-ತಾಯಿ ಹಾಗೂ ಸಂಬಂಧಿಕರು, ಈ ಘಟನೆಯ ಹಿಂದೆ ಪತಿ ಹುಸೇನಬಾಷ, ಮಾವ ನಬೀಸಾಬ್ ಮತ್ತು ಮನೆಯ ಮತ್ತೊಬ್ಬ ಸದಸ್ಯ ಹುಸೇನ್ ಬಾಷಾ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ಬಳಿಕ ಹೆಚ್ಚಿನ ಮಾಹಿತಿ ಬಯಲಾಗುವ ಸಾಧ್ಯತೆ ಇದೆ.
ಪತ್ನಿಗೆ ಆಗುತ್ತಿದ್ದ ಕಿರುಕುಳ ಹಾಗೂ ಅನ್ಯಾಯದ ವಿಚಾರದಲ್ಲಿ ಸತ್ಯ ಬಹಿರಂಗವಾಗಬೇಕೆಂದು ಮೃತ ಮಹಿಳೆಯ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.