
ಕಲಬುರಗಿ: ಆಸ್ತಿ ವರ್ಗಾವಣೆ ಸಂಬಂಧದ ಕಡತವನ್ನು ವಿಲೇವಾರಿ ಮಾಡುವುದಕ್ಕಾಗಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಹಾಗರಗಾ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ವೇದಾಂಗ್ ಅವರು ₹9,950 ಲಂಚ ಸ್ವೀಕರಿಸುತ್ತಿದ್ದ ವೇಳೆ ಕರ್ನಾಟಕ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆ ಕರ್ನಾಟಕ ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ದರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದಿದೆ.
ದೂರುದಾರ ಸಂಜೀವ್ ಅವರ ಮಾವ ಕಿಶನ್ ಪವಾರ್ ಮೃತಪಟ್ಟ ಹಿನ್ನೆಲೆ, ಅವರ ಹೆಸರಿನಲ್ಲಿದ್ದ ಹಾಗರಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಜಾದಪುರ ಗ್ರಾಮದ ಸರ್ವೆ ನಂ.111/1ರ ಖುಲ್ಲಾ ನಿವೇಶನ ಸಂಖ್ಯೆ 12 ಅನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕಾಗಿ ಮರಣ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನೂ ಸಲ್ಲಿಸಲಾಗಿತ್ತು.
ಆದರೆ, ಆಸ್ತಿ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ವೇದಾಂಗ್ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂಜೀವ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಪರಿಶೀಲನೆಯ ಬಳಿಕ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ, ಕಾರ್ಯದರ್ಶಿ ಲಂಚದ ಹಣ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಅವರನ್ನು ಬಂಧಿಸಿದರು.
ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಪವಾರ್ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.






