ಗೌರಿಬಿದನೂರು: ದೇಶದ ಗಡಿಯಲ್ಲಿ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, ಬಳಿಕ ಸಮಾಜದ ಸುರಕ್ಷತೆಗಾಗಿ ಪೊಲೀಸ್ ಇಲಾಖೆಗೆ ಸೇರಿದ್ದ ಯೋಧನ ಬದುಕು ಕರ್ತವ್ಯದಲ್ಲಿದ್ದಾಗಲೇ ದುರಂತ ಅಂತ್ಯ ಕಂಡಿದೆ. ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆ ಲೋಕೇಶ್ (49) ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಲೋಕೇಶ್ ಅವರು ಗೌರಿಬಿದನೂರು ತಾಲೂಕಿನ ಕಾದಲವೇಣಿ ಗ್ರಾಮದ ನಿವಾಸಿಯಾಗಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದು, 2019ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಗೆ ಸೇರಿದ್ದರು. ಅಂದಿನಿಂದ ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಸೇವೆಯನ್ನು ಮುಂದುವರಿಸಿದ್ದರು.
ಮಂಗಳವಾರ ಮುಂಜಾನೆ ಸುಮಾರು 1:45ರ ವೇಳೆಗೆ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಪುರ ಗ್ರಾಮ ಮತ್ತು ಗಿಡಿಗನಹಳ್ಳಿ ಗ್ರಾಮದ ಮಧ್ಯೆ ಇರುವ ಮೋರಿಗೆ ಅವರ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡರು ಎಂದು ತಿಳಿದುಬಂದಿದೆ. ತಕ್ಷಣ ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗಮಧ್ಯೆಯೇ ಲೋಕೇಶ್ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಡಿವೈಎಸ್ಪಿ ಜಗನ್ನಾಥ್ ರಾಯ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ಅವರು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಕಂಡುಬಂದಿದ್ದು, ಕುಟುಂಬದ ಆಧಾರಸ್ತಂಭನನ್ನು ಕಳೆದುಕೊಂಡ ನೋವು ಎಲ್ಲರ ಮನಕಲುಕುವಂತಿತ್ತು.
ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಭಾರತೀಯ ಸೇನೆಯಲ್ಲಿ ದೇಶದ ಗಡಿಯನ್ನು ಕಾಪಾಡಿದ ಯೋಧನಾಗಿ, ನಂತರ ಪೊಲೀಸ್ ಇಲಾಖೆಯಲ್ಲಿ ಜನರ ಸುರಕ್ಷತೆಗಾಗಿ ಸೇವೆ ಸಲ್ಲಿಸಿದ ಲೋಕೇಶ್ ಅವರ ಅಕಾಲಿಕ ನಿಧನ ಪೊಲೀಸ್ ಇಲಾಖೆ, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕ ಮೂಡಿಸಿದೆ.
ಕರ್ತವ್ಯಕ್ಕೆ ತೆರಳಿದ ರಕ್ಷಕ ಮತ್ತೆ ಮನೆಗೆ ಮರಳಲಿಲ್ಲ. ದೇಶಕ್ಕೂ ಸಮಾಜಕ್ಕೂ ತಮ್ಮ ಬದುಕನ್ನೇ ಸಮರ್ಪಿಸಿದ್ದ ಒಬ್ಬ ನಿಷ್ಠಾವಂತ ಯೋಧ ಹಾಗೂ ಪೊಲೀಸ್ ಸಿಬ್ಬಂದಿಯ ಬದುಕಿನ ಪಯಣ ಹೀಗೆ ದುರಂತವಾಗಿ ಅಂತ್ಯಗೊಂಡಿರುವುದು ಎಲ್ಲರ ಮನದಲ್ಲಿ ನೋವು ಮೂಡಿಸಿದೆ.
ವರದಿ: ಅವಿನಾಶ್
