ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು: ತಾಲ್ಲೂಕಿನ ತರಿದಾಳು ಗ್ರಾಮದಲ್ಲಿ ಎಂಎಸ್‌ಐಎಲ್ ಬಾರ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಭುಗಿಲೆದ್ದಿದ್ದು, ವಿಶೇಷವಾಗಿ ಮಹಿಳೆಯರು ಮುಂದಾಗಿ ಗುರುವಾರ ಬಾರ್ ಮುಚ್ಚುವಂತೆ ಬಲವಾದ ಹೋರಾಟ ನಡೆಸಿದ್ದಾರೆ.
ಪ್ರಮುಖವಾಗಿ, ಈ ಬಾರ್ ಸರ್ಕಾರಿ ಶಾಲೆಯ ಪಕ್ಕದಲ್ಲಿದ್ದು, ಪ್ರತಿದಿನ ಮಕ್ಕಳೂ, ವಿದ್ಯಾರ್ಥಿನಿಯರೂ, ಮಹಿಳೆಯರೂ ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಆದರೆ ಬಾರ್ ಬಳಿ ಕುಡಿದುನೋಡುವವರ ಅಸಭ್ಯ ವರ್ತನೆ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದ್ದು, ಮಕ್ಕಳಿಗೂ ಭಯವಿಟ್ಟಿದೆ. ಶಾಲೆಯವರಿಂದ ಮನೆಗೆ ತಲುಪಲು ವಿದ್ಯಾರ್ಥಿನಿಯರು ಕಳವಳಗೊಂಡು ತಮ್ಮ ಪಾಲಕರಿಗೆ ಕರೆಮಾಡಿ ಕರೆಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಕುಡಿತದ ಹಿನ್ನಲೆಯಲ್ಲಿ ಸಣ್ಣ ವಯಸ್ಸಿನ 20ಕ್ಕೂ ಹೆಚ್ಚು ಯುವಕರು ಸಾವನ್ನಪ್ಪಿದ್ದಾರೆ. ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಲಾಗಿದೆ.
ಇದರ ಬೆನ್ನಲ್ಲೇ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಹುಮಾನ್ಯವಾದ ತೀರ್ಮಾನವೊಂದನ್ನು ತೆಗೆದುಕೊಂಡ ಮಹಿಳೆಯರು – “ಗ್ರಾಮದಲ್ಲಿ ಶಾಂತಿ ಮತ್ತು ಭದ್ರತೆ ಕಾಪಾಡಬೇಕು ಎಂದರೆ ಬಾರ್ ಮುಚ್ಚಲೇಬೇಕು” ಎಂಬ ಘೋಷಣೆ ಜೊತೆಗೆ, ಬಾರ್‌ಗೆ ಬೀಗ ಹಾಕಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು.
ತರಿದಾಳು ಗ್ರಾಮದ ಈ ಹೋರಾಟ ಇಡೀ ತಾಲ್ಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳು ಇನ್ನು ಮುಂದೆ ಈ ಸಂಬಂಧ ಎಂತಹ ಕ್ರಮ ಕೈಗೊಳ್ಳುತ್ತಾರೆ ಎಂಬುದರತ್ತ ಎಲ್ಲರ ಗಮನ ಹರಿದಿದೆ. ವರದಿ: ಅವಿನಾಶ್ ಎ.ಆರ್,
