ಪಾಣಿಪತ್ (ಹರಿಯಾಣ), ಜುಲೈ 7: ಹರಿಯಾಣದ ಪಾಣಿಪತ್ ನಗರದಲ್ಲಿ ಮನ ಕಲುಕುವ ಘಟನೆಯೊಂದು ಬೆಳಕಿಗೆ ಬಂದಿದೆ. ನಿಂತಿದ್ದ ಖಾಲಿ ರೈಲು ಬೋಗಿಯಲ್ಲಿ 35 ವರ್ಷದ ಮಹಿಳೆಯೊಬ್ಬರ ಮೇಲೆ ಮೂವರು ಪುರುಷರು ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಜೂನ್ 24 ರಂದು ತನ್ನ ಪತಿಯೊಂದಿಗೆ ಜಗಳವಾಡಿದ ಬಳಿಕ ಮನೆಯಿಂದ ನಿರ್ಗಮಿಸಿದ್ದರು. ಆಗಾಗ್ ಜಗಳವಾಗಿ ಮನೆ ಬಿಟ್ಟು ಹೋಗುತ್ತಿದ್ದ ಈ ಮಹಿಳೆ ಪ್ರತೀಬಾರಿಯಂತೆಯೇ ಹಿಂದಿರುಗುತ್ತಿದ್ದರು. ಆದರೆ ಈ ಬಾರಿ ಎರಡು ದಿನ ಕಳೆದರೂ ಮನೆಗೆ ಮರಳದ ಕಾರಣ ಪತಿ ಜೂನ್ 26 ರಂದು ಪೊಲೀಸರಿಗೆ ಪತ್ನಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು.

ಪೀಡಿತೆಯ ಹೇಳಿಕೆಯಂತೆ, ಜೂನ್ 26 ರಂದು ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ನನ್ನ ಬಳಿ ಬಂದು, “ನಿನ್ನ ಪತಿ ನನ್ನನ್ನು ಕಳುಹಿಸಿದ್ದಾರೆ” ಎಂದು ಹೇಳಿದ. ಅವನ ಮಾತು ನಂಬಿದ ನಾನು ಆತನೊಂದಿಗೆ ಹೋಗಿದ್ದು, ಬಳಿಕ ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ಬೋಗಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ. ನಂತರ, ಇನ್ನುಿಬ್ಬರು ವ್ಯಕ್ತಿಗಳು ಬಂದು ಅವರು ಕೂಡ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಮಹಿಳೆ ದೂರು ನೀಡಿದ್ದಾರೆ.

ಅಪರಾಧಕ್ಕೆ ಒಳಗಾದ ಬಳಿಕ ಮಹಿಳೆಯನ್ನು ಸೋನಿಪತ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆರೋಪಿಗಳು ಮಹಿಳೆಯನ್ನು ರೈಲು ಹಳಿಗಳ ಮೇಲೆ ಎಸೆದಿದ್ದಾರೆ. ದುರ್ಘಟನೆಯಂತೆ ರೈಲು ಹರಿದ ಪರಿಣಾಮಾಗಿ ಮಹಿಳೆಯೊಬ್ಬಳು ತೀವ್ರ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕ್ವಿಲ್ಲಾ ಠಾಣೆ ಇನ್‌ಚಾರ್ಜ್ ಎಸ್‌ಎಚ್‌ಒ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸಾಮೂಹಿಕ ಅತ್ಯಾಚಾರದ ಕಾನೂನು ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಪಾಣಿಪತ್‌ನ ಸರ್ಕಾರಿ ರೈಲ್ವೆ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಹೃದಯವಿದ್ರಾವಕ ಈ ಘಟನೆಯಿಂದ ಮಹಿಳೆಯ ಭದ್ರತೆ ಪ್ರಶ್ನೆಗೆ ಒಳಗಾಗಿದೆ. ಆರೋಪಿಗಳನ್ನು ಹಿಡಿದು ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related News

error: Content is protected !!