
ಆನೇಕಲ್, ಜುಲೈ 09: ದೊಡ್ಡ ನಾಗಮಂಗಲದ ಸಾಯಿ ಲೇಔಟ್ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಇದ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಸಂತ್ರಸ್ತೆ ದೊಡ್ಡ ನಾಗಮಂಗಲದ ಸಾಯಿ ಲೇಔಟ್‌ನಲ್ಲಿರುವ ತನ್ನ ಸ್ನೇಹಿತನ ಮನೆಗೆ ಭೇಟಿ ನೀಡಿದ್ದ ವೇಳೆ ಈ ಅಮಾನುಷ ಕೃತ್ಯ ನಡೆದಿದೆ. ಆಕೆಯ ಸ್ಥಳದಲ್ಲಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯೊಳಗೆ ನುಗ್ಗಿ, ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಅತ್ಯಾಚಾರ ಬಳಿಕ ಆರೋಪಿಗಳು ಮಹಿಳೆಯ ಬಳಿ ಹಣವಿಗೂ ಬೇಡಿಕೆ ಇಟ್ಟಿದ್ದಾರೆ. ಆತಂಕಗೊಂಡ ಸಂತ್ರಸ್ತೆ, ಹಣದ ಅವಶ್ಯಕತೆಯನ್ನು ಸ್ನೇಹಿತೆಯ ಬಳಿ ಹೇಳಿ, ಆಕೆಯ ಬ್ಯಾಂಕ್ ಖಾತೆ ಮೂಲಕ ಹಣ ವರ್ಗಾಯಿಸಿದ್ದಾರೆ. ಆರೋಪಿಗಳು ಈ ಹಣವನ್ನು ತಮ್ಮ ಬೆಟ್ಟಿಂಗ್ ಆ್ಯಪ್ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ.
ಇದೆಲ್ಲಕ್ಕೂ ಮೀರಿದ ಆರೋಪಿಗಳು, ಮಹಿಳೆಯ ಹಾಗೂ ಆಕೆಯ ಸ್ನೇಹಿತನ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು, ಮನೆಯಲ್ಲಿದ್ದ ಪ್ರಿಡ್ಜ್ ಹಾಗೂ ವಾಶಿಂಗ್ ಮೆಷಿನ್‌ನ್ನು ಬಲವಂತವಾಗಿ ಹೊತ್ತೊಯ್ದಿದ್ದಾರೆ.
ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.