ಬಲರಾಂಪುರ (ಉತ್ತರ ಪ್ರದೇಶ): 21 ವರ್ಷದ ವಿಶೇಷಚೇತನ ಯುವತಿಯನ್ನು ಬೈಕ್‌ನಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ಬಯಲಾಗಿದೆ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ, ನಿರ್ಜನ ರಸ್ತೆಯಲ್ಲಿ ಆರೋಪಿಗಳು ಯುವತಿಯನ್ನು ಹಿಂಬಾಲಿಸುತ್ತಿರುವ ಕ್ಷಣಗಳು ದಾಖಲಾಗಿವೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ಸಂಜೆ ಯುವತಿ ತನ್ನ ಮಾವನ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮನೆಗೆ ಕಾಲ್ನಡಿಗೆಯಲ್ಲಿ ಹಿಂತಿರುಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಒಬ್ಬ ವ್ಯಕ್ತಿ ಬಲವಂತವಾಗಿ ಆಕೆಯನ್ನು ಹತ್ತಿಸಿಕೊಂಡು ಹೋಗಿದ್ದಾನೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ವಿಶಾಲ್ ಪಾಂಡೆ ಹೇಳುವಂತೆ, ಆತನಿಂದ ಅತ್ಯಾಚಾರ ನಡೆದಿರುವುದು ತಿಳಿಸಿದ್ದಾರೆ.

ಆದರೆ, ಪೀಡಿತೆಯ ಕುಟುಂಬದವರು ಈ ಪ್ರಕರಣದಲ್ಲಿ ಒಬ್ಬನೇ ಅಲ್ಲ, ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಘಟನೆಯ ನಂತರ ನಡೆಸಿದ ಕಾರ್ಯಾಚರಣೆಯಲ್ಲಿ, ಪೊಲೀಸರು ಆರೋಪಿಗಳಾದ ಅಂಕುರ್ ವರ್ಮಾ ಮತ್ತು ಹರ್ಷಿತ್ ಪಾಂಡೆ ಅವರನ್ನು ಬೆನ್ನಟ್ಟಿ ಬಂಧಿಸುವ ವೇಳೆ ಫೈರಿಂಗ್ ನಡೆದಿದೆ. ಗಾಯಗೊಂಡ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯುವತಿ ಮನೆಗೆ ಹಿಂತಿರುಗದ ಕಾರಣ ಕುಟುಂಬದವರು ಹುಡುಕಾಟ ನಡೆಸಿ, ಪೊಲೀಸ್ ಠಾಣೆಯ ಹತ್ತಿರದ ಪೊದೆಯಲ್ಲಿ ಆಕೆಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಹಚ್ಚಿದರು. ಆಸ್ಪತ್ರೆಗೆ ಕರೆದೊಯ್ದ ನಂತರ ಪ್ರಜ್ಞೆ ಬಂದ ಆಕೆ, ಬೈಕ್‌ನಲ್ಲಿ ಬಂದ ಇಬ್ಬರು ಸೇರಿ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಪೋಷಕರಿಗೆ ತಿಳಿಸಿದ್ದಾರೆ.

ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ವೇಗಗೊಳಿಸಿದ್ದಾರೆ.

error: Content is protected !!