ರಾಯಚೂರು, ಜುಲೈ 12: ರಾಯಚೂರು ತಾಲೂಕಿನ ಗುರ್ಜಾಪುರ ಸಮೀಪದ ಕೃಷ್ಣಾ ನದಿಗೆ ಸೇತುವೆಯ ಮೇಲಿಂದ ಬಿದ್ದು ಜೀವಭಯದಲ್ಲಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಸಾಹಸಿಕವಾಗಿ ರಕ್ಷಿಸಿದ ಘಟನೆ ನಡೆದಿದೆ. ಘಟನೆಯು ಶನಿವಾರ ಸಂಜೆ ನಡೆದಿದ್ದು, ಪತಿ ನದಿಗೆ ಬಿದ್ದ ಹಿನ್ನಲೆಯಲ್ಲಿ ಪತ್ನಿಯ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ನವದಂಪತಿ ಸೇರಿ ಸೇತುವೆಯ ಹತ್ತಿರ ಫೋಟೋ ಸೆಶನ್‌ಗೆ ಆಗಮಿಸಿದ್ದರು. ಮೊದಲು ಪತ್ನಿಯ ಫೋಟೋ ತೆಗೆದ ಪತಿ, ಬಳಿಕ ತನ್ನ ಫೋಟೋ ತೆಗೆದುಕೊಳ್ಳಲು ಪತ್ನಿಯನ್ನು ಬೇಡಿಕೊಂಡಿದ್ದ. ಈ ಸಂದರ್ಭ ಪತಿ ಸೇತುವೆಯ ತುದಿಯಲ್ಲಿ ನಿಂತಾಗ, ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ಪತಿಯನ್ನು ನದಿಗೆ ನೂಕಿದ್ದಾಳೆ ಎಂಬ ಆರೋಪ ಪತಿ ಮಾಡಿದ್ದಾರೆ.

ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದರೂ, ಪತಿ ಈಜುತ್ತಾ ಮುಂದೆ ಹೋಗಿ ನದಿಯ ಮಧ್ಯಭಾಗದ ಕಲ್ಲು ಬಂಡೆಯಲ್ಲಿ ಆಶ್ರಯ ಪಡೆದುಕೊಂಡು ಜೀವ ಉಳಿಸಿಕೊಂಡಿದ್ದಾರೆ. ಅನಂತರ ಸಹಾಯಕ್ಕಾಗಿ ಕೂಗಾಡುತ್ತಿದ್ದ ಪತಿಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಹಗ್ಗದ ಸಹಾಯದಿಂದ ಸುಮಾರು ಎರಡು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದರು.

ಈ ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ಸ್ಪಷ್ಟತೆ ಬಂದಿಲ್ಲ. ದಂಪತಿ ಯಾರು, ಎಲ್ಲಿಯವರು ಎಂಬ ವಿವರಗಳೂ ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಸ್ಥಳೀಯ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.

error: Content is protected !!