ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ, ಜನಪ್ರಿಯ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನ ಕೆಂಗೇರಿ ಸಮೀಪದ ಅಭಿಮಾನ್ ಸ್ಟುಡಿಯೋದಲ್ಲಿ ರಾತ್ರೋರಾತ್ರಿ ನೆಲಸಮ ಮಾಡಿರುವ ಘಟನೆ ಅಭಿಮಾನಿಗಳ ಮನಸ್ಸಿಗೆ ಭಾರೀ ಆಘಾತ ಉಂಟುಮಾಡಿದೆ.

ಸಿನಿಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಈ ಸ್ಥಳವು ಹಿರಿಯ ನಟ ದಿ. ಬಾಲಕೃಷ್ಣ ಅವರ ಕುಟುಂಬದ ಸ್ವತ್ತಿನಲ್ಲಿತ್ತು. ಸರ್ಕಾರವು ಸ್ಮಾರಕ ನಿರ್ಮಾಣಕ್ಕಾಗಿ ಒಂದು ಎಕರೆ ಭೂಮಿಯನ್ನು ಪಡೆದಿದ್ದರೂ, ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬಾಲಕೃಷ್ಣ ಕುಟುಂಬ ಹೈಕೋರ್ಟ್ ಮೊರೆ ಹೋಗಿತ್ತು. ನ್ಯಾಯಾಲಯದ ಆದೇಶದಂತೆ ಈ ತೆರವು ಕಾರ್ಯ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಮಾಹಿತಿ ತಿಳಿದ ತಕ್ಷಣ, ನಿರ್ದೇಶಕ ರವಿ ಶ್ರೀವತ್ಸ ಸ್ಥಳಕ್ಕೆ ಧಾವಿಸಿ ಭಾವುಕರಾದರು. ಸಮಾಧಿ ತೆರವುಗೊಂಡ ದೃಶ್ಯ ಕಣ್ಣಾರೆ ಕಂಡ ಅವರು ಕಣ್ಣೀರು ಹಾಕಿದ್ದು, ಬಳಿಕ ಫೇಸ್‌ಬುಕ್ ಲೈವ್ ಮೂಲಕ ತಮ್ಮ ನೋವನ್ನು ಹಂಚಿಕೊಂಡರು. “ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ ಈ ಸ್ಥಳಕ್ಕೆ ಅಭಿಮಾನಿಗಳಿಗೆ ಅನನ್ಯ ಭಾವನಾತ್ಮಕ ನಂಟಿತ್ತು. ಈಗ ಅದು ಸಂಪೂರ್ಣವಾಗಿ ಅಳಿದುಹೋಗಿರುವುದು ನೋವು ತಂದಿದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಗೊಂಡಿದ್ದರೂ, ಅಭಿಮಾನ್ ಸ್ಟುಡಿಯೋದಲ್ಲಿ ಅವರ ದೇಹಕ್ಕೆ ಅಂತಿಮ ವಿಧಿ ನಡೆದಿದ್ದರಿಂದ ಅಭಿಮಾನಿಗಳಿಗೆ ಈ ಸ್ಥಳದ ಪ್ರೀತಿ ಬೇರೆಮಟ್ಟದಲ್ಲಿತ್ತು. ಆದರೆ, ವರ್ಷಗಳಿಂದ ನಡೆದುಬಂದಿದ್ದ ಜಮೀನು ವಿವಾದ ಮತ್ತು ನ್ಯಾಯಾಲಯದ ಆದೇಶದಿಂದ ಸ್ಮಾರಕ ತೆರವುಗೊಳ್ಳುವುದನ್ನು ಅಭಿಮಾನಿಗಳು ಮನಸ್ಸಾರೆ ಒಪ್ಪಿಕೊಳ್ಳಲಾಗುತ್ತಿಲ್ಲ.

ಕಾನೂನಾತ್ಮಕ ಕಾರಣದಿಂದ ತೆರವು ನಡೆದಿದ್ದರೂ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹತ್ವದ ನೆನಪುಗಳನ್ನು ಹೊತ್ತಿದ್ದ ಈ ಸ್ಥಳದ ಅಳಿವು, ವಿಷ್ಣುವರ್ಧನ್ ಅಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ಗಾಯವಾಗಿ ಉಳಿಯಲಿದೆ.

Related News

error: Content is protected !!