
ಬಳ್ಳಾರಿ (ಆ.3): ಬಳ್ಳಾರಿ ನಗರದ ಐಟಿಐ ಮೈದಾನದಲ್ಲಿ ಶನಿವಾರ ಸಂಜೆಯ ವೇಳೆ ಘಟಿಸಿದ ಭಯಾನಕ ದಾಳಿ ಇದೀಗ ನಗರದಲ್ಲಿ ಆತಂಕ ಮೂಡಿಸಿದೆ. ತಮ್ಮಲ್ಲದ ಫೋಟೋವೊಂದನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದ ಕಾರಣಕ್ಕಾಗಿ, ದೊಡ್ಡಬಸವ (19) ಎಂಬ ಯುವಕನ ಮೇಲೆ ಹತ್ತು ಜನ ವಿದ್ಯಾರ್ಥಿಗಳ ಗುಂಪು ಸಿನಿಮೀಯ ಶೈಲಿಯಲ್ಲಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ದಾಳಿಗೆ ಒಳಗಾದ ಯುವಕ ಬಳ್ಳಾರಿ ನಿವಾಸಿಯಾಗಿದ್ದು, ಶಶಿಕುಮಾರ್, ಸಾಯಿಕುಮಾರ್ ಸೇರಿದಂತೆ ಇತರ ಆರೋಪಿಗಳು ಕೂಡಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದಾರೆ. ಆರೋಪಿಗಳು ಬೈಕ್‌ನಲ್ಲಿ ಬಂದು ಯುವಕನನ್ನು ಎಳೆದೊಯ್ದು ಮೈದಾನದಲ್ಲಿ ಹೊಡೆತದ ಅಮಾನವೀಯ ಝಳಕ್ಕೆ ಗುರಿಯಾಗಿಸಿದ್ರು. ಕ್ರಿಕೆಟ್ ಬ್ಯಾಟ್‌ಗಳು, ಲೆದರ್ ಬೆಲ್ಟ್‌ಗಳು, ಮತ್ತು ಕಾಲು-ಕೈಗಳಿಂದ ಹಲ್ಲೆ ನಡೆಸಿದ ಪರಿಣಾಮ, ದೊಡ್ಡಬಸವನ ತುಟಿ, ದವಡೆ, ಎದೆ, ಬೆನ್ನು ಹಾಗೂ ಸೊಂಟ ಭಾಗದಲ್ಲಿ ಗಂಭೀರ ಗಾಯಗಳಾಗಿವೆ.
ಮೂಲಗಳ ಪ್ರಕಾರ, ಘಟನೆಗೆ ಮೂಲ ಕಾರಣವೆಂದರೆ – ಒಂದು ಸಮಾರಂಭದಲ್ಲಿ ತೆಗೆದ ಅಪ್ರಾಪ್ತೆಯ ಫೋಟೋವನ್ನು ದೊಡ್ಡಬಸವ ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದನು. ಇದರಿಂದ ಆಕ್ರೋಶಗೊಂಡ ಆರೋಪಿಗಳ ಗುಂಪು, ಬಾಲಕನಿಗೆ ಪಾಠ ಕಲಿಸುವ ಉದ್ದೇಶದಿಂದ ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ವೇಳೆ ದೊಡ್ಡಬಸವ ಕೈ ಮುಗಿದು, ಕ್ಷಮೆ ಕೇಳಿದರೂ ಆರೋಪಿ ಗುಂಪು ಯಾವ ರೀತಿಯ ದಯೆ ತೋರಿಸದೇ ನಿರ್ದಯವಾಗಿ ಥಳಿಸಿದೆ. ಗಾಯಾಳು ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬಂಧ ಬಳ್ಳಾರಿ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ 10 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ, ಪೊಲೀಸರು ಬಂಧನೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಕರಣ ತೀವ್ರವಾಗಿ ಬೆಳೆಯುತ್ತಿರುವ ಬೆನ್ನಲ್ಲೇ ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ.