ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಐದು ಹುಲಿಗಳ ಅಸಹಜ ಸಾವು ಪ್ರಕರಣ ಸಂಬಂಧ ವನ್ಯಜೀವಿ ಸಂರಕ್ಷಣೆಯಲ್ಲಿ ಗಂಭೀರವಾದ ಕರ್ತವ್ಯ ಲೋಪ ನಡೆದಿದೆ ಎಂದು ಅಧಿಕಾರದ ವರದಿಗಳು ದೃಢಪಡಿಸಿದ್ದ ಬೆನ್ನಲ್ಲೇ, ಎಂ.ಎಂ.ಹಿಲ್ಸ್ ವನ್ಯಜೀವಿ ವಿಭಾಗದ ಉಪ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (DCF) ವೈ.ಚಕ್ರಪಾಣಿ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

ವನ್ಯಜೀವಿ ಇಲಾಖೆಯ ಉನ್ನತ ಮಟ್ಟದ ತನಿಖಾ ಸಮಿತಿ ತನಿಖೆ ನಡೆಸಿ ಸರ್ಕಾರಕ್ಕೆ ನೀಡಿದ ಶಿಫಾರಸಿನ ಮೇರೆಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಮಾನತಿನ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ಜಾರಿಗೊಂಡಿದ್ದು, ಇನ್ನಷ್ಟೆ ಇಲಾಖಾ ವಿಚಾರಣೆಯು ನಡೆಯಬೇಕಿದೆ.

ವೇತನ ವಿಳಂಬವೇ ಕಾರಣ…

ತನಿಖಾ ವರದಿಯ ಪ್ರಕಾರ, ಈ ವರ್ಷ ಮಾರ್ಚ್‌ನಿಂದ ಮೇವರೆಗೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಪಾವತಿಯಲ್ಲಿ ಅಸಮರ್ಪಕತೆ ಕಂಡುಬಂದಿದೆ. ವೇತನವಿಲ್ಲದೇ ನಿರ್ಗತಿಕರಾಗಿದ್ದ ವಾಚರ್‌ಗಳು ಜೂನ್ 23ರಂದು ಕೊಳ್ಳೇಗಾಲದ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೂ ದಾಖಲಾಗಿದೆ.

ಈ ಸಂದರ್ಭದಲ್ಲಿ ಗುತ್ತಿಗೆದಾರ ಸಂಸ್ಥೆ ವೇತನ ಪಾವತಿಸಲು ವಿಳಂಬ ಮಾಡಿದರೂ, ಡಿಸಿಎಫ್ ಚಕ್ರಪಾಣಿ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ವೇತನ ಪಾವತಿಗೆ ಅಗತ್ಯ ಅನುದಾನ ಇದ್ದರೂ ಮಾರ್ಚ್ ತಿಂಗಳ ವೇತನವೇ ನೀಡಲಾಗಿರಲಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳ ವೇತನಕ್ಕಾಗಿ ಖಜಾನೆಗೆ ಬಿಲ್ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂಬುದು ತನಿಖಾ ವರದಿಯಲ್ಲಿದೆ.

ನಿಯಮ ಉಲ್ಲಂಘನೆ ಆರೋಪ

ಅಮಾನತುಗೊಂಡ ಅಧಿಕಾರಿಯಾದ ವೈ.ಚಕ್ರಪಾಣಿ ಅವರಿಗೆ ಈಗಿನಿಂದ ಕೇಂದ್ರಸ್ಥಾನ ತೊರೆಯುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದು, ಯಾವುದೇ ಸಂತರ ಇಲ್ಲದೆ ಸ್ಥಳ ಬದಲಾಯಿಸಿದರೆ ಮತ್ತಷ್ಟು ಕ್ರಮ ಎದುರಾಗುವ ಸಾಧ್ಯತೆ ಇದೆ.

ಈ ಮೂಲಕ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ನಡೆದ ಪ್ರಾಣಿಹತ್ಯೆಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಪರವಾಗಿರುವ ನಿರ್ಲಕ್ಷ್ಯವೂ ಹತ್ತಿರದಿಂದ ಪರಿಶೀಲನೆಗೆ ಒಳಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಇನ್ನಷ್ಟು ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬಹುದೆಂಬ ಸೂಚನೆ ಸರ್ಕಾರದೊಳಗಿನಿಂದ ವ್ಯಕ್ತವಾಗಿದೆ.

Related News

error: Content is protected !!