ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ ಮತ್ತು ಅನಧಿಕೃತ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ವಾರ್ತಾ ಇಲಾಖೆಯ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳ ವತಿಯಿಂದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮಾತ್ರ ಜಿಲ್ಲಾಡಳಿತದ ವತಿಯಿಂದ ಗುರುತಿನಚೀಟಿಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು.ಅನಧಿಕೃತ ಪತ್ರಕರ್ತರ ಹಾವಳಿ ಹಾಗೂ “ಪ್ರೆಸ್” ಹೆಸರು ದುರ್ಬಳಕೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಜತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ(ಆ.4) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಮಾಧ್ಯಮ ಸಂಸ್ಥೆಗಳು ನೀಡುವ ಶಿಫಾರಸ್ಸು ಪತ್ರವನ್ನು ಆಧರಿಸಿ ಆ ಸಂಸ್ಥೆಯ ವರದಿಗಾರರಿಗೆ ಜಿಲ್ಲಾಡಳಿತ ವತಿಯಿಂದ ಗುರುತಿನ ಚೀಟಿಯನ್ನು ನೀಡಲಾಗುವುದು.
ಸರಕಾರಿ ಕಾರ್ಯಕ್ರಮಗಳಿಗೆ ಹಾಗೂ ಸಭೆ-ಸಮಾರಂಭಗಳಿಗೆ ಅಂತಹವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಈ ಬಗ್ಗೆ ಎಲ್ಲ ಇಲಾಖೆಗಳಿಗೂ ಮಾಹಿತಿಯನ್ನು ಕೂಡ ನೀಡಲಾಗುವುದು. ಮಾಧ್ಯಮ ಸಂಸ್ಥೆಗಳು ಕೂಡ ಈ ಕುರಿತು ಜಾಗೃತಿ ಮೂಡಿಸಬೇಕು. ಜಿಲ್ಲೆಯಲ್ಲಿರುವ ಮಾಧ್ಯಮ ಸಂಸ್ಥೆಗಳು ತಮ್ಮ ಸಂಸ್ಥೆಯ ವರದಿಗಾರರ ಹೆಸರು, ಗುರುತಿನ ಚೀಟಿ ಮತ್ತಿತರ ವಿವರವನ್ನು ಒಂದು ವಾರದೊಳಗೆ ವಾರ್ತಾ ಇಲಾಖೆಗೆ ಕಳುಹಿಸಿಕೊಟ್ಟರೆ ಅಂತಹವರಿಗೆ ಗುರುತಿನ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅದೇ ರೀತಿ ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳ ತಾಲ್ಲೂಕು ಮಟ್ಟದ ವರದಿಗಾರರಿಗೆ ಕೂಡ ಅವರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಯ ಶಿಫಾರಸ್ಸು ಆಧರಿಸಿ ತಹಶೀಲ್ದಾರರು ಮತ್ತು ವಾರ್ತಾ ಇಲಾಖೆಯ ಮೂಲಕವೇ ಗುರುತಿನ ಚೀಟಿಯನ್ನು ವಿತರಿಸಲಾಗುವುದು.
ಆಯಾ ತಾಲ್ಲೂಕುಗಳ ವರದಿಗಾರರಿಗೆ ನೀಡಲಾದ ಗುರುತಿನ ಚೀಟಿ ಆಯಾ ತಾಲ್ಲೂಕಿನ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ಪಷ್ಟಪಡಿಸಿದರು.
ಯೂಟ್ಯೂಬ್ ಚಾನೆಲ್ ಗಳಿಗೆ ಅವಕಾಶವಿಲ್ಲ-ಸ್ಪಷ್ಟನೆ: ಯೂಟ್ಯೂಬ್ ಚಾನೆಲ್ ಗಳಿಗೆ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಯಾವುದೇ ಕಾರಣಕ್ಕೂ ಗುರುತಿನ ಚೀಟಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಯಾವುದೇ ಸರಕಾರಿ ಕಾರ್ಯಕ್ರಮಗಳಿಗೆ ಅಧಿಕೃತ ಮಾಧ್ಯಮ ಸಂಸ್ಥೆಗಳ ವರದಿಗಾರರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಅಧಿಕೃತ ಮಾಧ್ಯಮಗಳ ಪ್ರತಿನಿಧಿಗಳಿಗೆ ಗುರುತಿನ ಚೀಟಿ ನೀಡಲಾಗುವುದು. ಮಾಧ್ಯಮ ಪ್ರತಿನಿಧಿಗಳು ಕೂಡ ಎಲ್ಲರಿಗೆ ಕಾಣಿಸುವಂತೆ ಇವುಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ತಿಳಿಸಿದರು.
ಈಗಾಗಲೇ ವಾರ್ತಾ ಇಲಾಖೆಯ ಮಾನ್ಯತಾ ಕಾರ್ಡು ಹೊಂದಿದವರಿಗೆ ಕೂಡಲೇ ಜಿಲ್ಲಾಡಳಿತದಿಂದ ಗುರುತಿನ ಚೀಟಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ಪಷ್ಟಪಡಿಸಿದರು.
ಅನಧಿಕೃತ ಪತ್ರಕರ್ತರು ಸರ್ಕಾರಿ ಕಚೇರಿಗಳಿಗೆ ತೆರಳಿ ಅಧಿಕಾರಿಗಳಿಗೆ ಕಿರುಕುಳ ನೀಡುವ ಪ್ರಕರಣ ಕಂಡುಬಂದರೆ ತಕ್ಷಣವೇ ತಮಗೆ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನೇರವಾಗಿ ಮಾಹಿತಿಯನ್ನು ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಇದೇ ವೇಳೆ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರು, “ಸುದ್ದಿ ಸಂಗ್ರಹಕ್ಕಾಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಜಿಲ್ಲಾಡಳಿತದಿಂದ ಗುರುತಿನ ಚೀಟಿಯನ್ನು ನೀಡಲಾಗುವುದು. ಆಯಾ ಸಂಸ್ಥೆಯ ಒಳಗಡೆ ಕೆಲಸ ಮಾಡುವವರಿಗೆ ಇದರ ಅಗತ್ಯವಿರುವುದಿಲ್ಲ” ಎಂದು ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಮಾತನಾಡಿ, ಅಧಿಕೃತ ಪತ್ರಕರ್ತರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಗುರುತಿನ ಚೀಟಿಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಯಾವುದೇ ಮಾಧ್ಯಮ ಸಂಸ್ಥೆಯ ಶಿಫಾರಸ್ಸು ಪತ್ರ ಬಳಸಿಕೊಂಡು ಗುರುತಿನ ಚೀಟಿ ಪಡೆಯುವ ವರದಿಗಾರರು ತಮ್ಮ ಖಾಸಗಿ ಯೂಟ್ಯೂಬ್ ಚಾನೆಲ್ ಗಳಿಗೆ ಕೆಲಸ ಮಾಡಿದರೆ ಅದಕ್ಕೆ ಆಯಾ ಸಂಸ್ಥೆಯ ಹೊಣೆಗಾರಿಕೆ ಇರುತ್ತದೆ ಎಂದರು. ವರದಿಗಾರರು ಕೆಲಸ ಬಿಟ್ಟಾಗ ಅದನ್ನು ತಕ್ಷಣವೇ ವಾರ್ತಾ ಇಲಾಖೆಗೆ ತಿಳಿಸಬೇಕು ಎಂದು ಹೇಳಿದರು.
ಇದೇ ವೇಳೆ ಸಲಹೆಗಳನ್ನು ನೀಡಿದ ಅನೇಕ ಮಾಧ್ಯಮ ಪ್ರತಿನಿಧಿಗಳು, ಸ್ವಯಂಘೋಷಿತ ಮಾಧ್ಯಮವಾಗಿರುವ ಯೂಟ್ಯೂಬ್ ಚಾನೆಲ್ ಗಳು ಮತ್ತು ನಕಲಿ ಪತ್ರಕರ್ತರ ಹಾವಳಿ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು “ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಎಲ್ಲರೂ ಸ್ವಯಂಘೋಷಿತ ಪತ್ರಕರ್ತರಾಗುತ್ತಿದ್ದಾರೆ. ಇದರಿಂದ ಮಾಧ್ಯಮಕ್ಕೆ ಕೆಟ್ಟ ಹೆಸರು ಬರುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು
ಸಾವಿರಾರು ಯೂಟ್ಯೂಬ್ ಚಾನೆಲ್: ಜಿಮೇಲ್ ಐಡಿ ಇರುವರು ಯೂಟ್ಯೂಬ್ ಚಾನೆಲ್ ಮಾಡಬಹುದು. ಇದನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಾವಿರಾರು ಇಂತಹ ಚಾನೆಲ್ ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹವುಗಳಿಗೆ ಕಡಿವಾಣ ಹಾಕಬೇಕಿದೆ. ಅನಧಿಕೃತವಾಗಿ ವಾಹನಗಳ ಮೇಲೆ ಬಳಸುತ್ತಿರುವ “ಪ್ರೆಸ್” ಸ್ಟಿಕ್ಕರ್ ತೆರವು ಹಾಗೂ ನಕಲಿ ಪತ್ರಕರ್ತರ ಹಾವಳಿ ತಡೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಎಲ್ಲ ಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಮಾಧ್ಯಮ ಪ್ರತಿನಿಧಿಗಳು ಭರವಸೆ ನೀಡಿದರು. ಬ್ಲ್ಯಾಕ್ ಮೇಲ್ ಮಾಡಿದರೆ ತಕ್ಷಣ ಪ್ರಕರಣ ದಾಖಲಿಸಬೇಕು:ಅಸಲಿ-ನಕಲಿ ಯಾರೇ ಇರಲಿ ಎಲ್ಲರ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಬೇಕು.
ಪಿಡಿಓ ಸೇರಿದಂತೆ ಯಾವುದೇ ಸರಕಾರಿ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿದರೆ ತಕ್ಷಣವೇ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಬೇಕು. ಅಧಿಕೃತ ಮಾಧ್ಯಮ ಸಂಸ್ಥೆಗಳ ಪಟ್ಟಿಯನ್ನು ಎಲ್ಲ ಕಚೇರಿಗೆ ಕಳುಹಿಸಬೇಕು. ಇದರಿಂದ ನಕಲಿ ಪತ್ರಕರ್ತರ ಹಾವಳಿಯನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು. ಮುದ್ರಣ ಮಾಧ್ಯಮ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದ ವರದಿಗಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯಾದ್ಯಂತ ಈ ರೀತಿಯ ಕ್ರಮ ಜಾರಿಗೆ ತಂದು ಯುಟ್ಯೂಬ್ ಚಾನೆಲ್ ಗಳು ಮತ್ತು ಅನಧಿಕೃತ ಪತ್ರಕರ್ತರಗೆ ಬ್ರೇಕ್ ಹಾಕಲು ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಿದ್ದಾರೆ.
ಭೋಪಾಲ್ : ಪ್ರೀತಿಯನ್ನು ನಿರಾಕರಿಸಿದ ಶಿಕ್ಷಕಿಯ ಮೇಲೆ ಹದಿಹರೆಯದ ವಿದ್ಯಾರ್ಥಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ನರಸಿಂಹಪುರದಲ್ಲಿ…
ರೈಲಿನ ಶೌಚಾಲಯದಲ್ಲಿ ಚಿತ್ರೀಕರಿಸಲ್ಪಟ್ಟಿರುವ ಒಂದು ವಿಡಿಯೊ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೊದಲ್ಲಿ ಮೊದಲು ಮಾಸ್ಕ್ ಧರಿಸಿರುವ ವ್ಯಕ್ತಿಯೊಬ್ಬ ಶೌಚಾಲಯದಿಂದ…
ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ದಂಧೆಯ ಮೇಲೆ ಪೊಲೀಸರು ಬಿಗಿ ನಿಗಾವಹಿಸುತ್ತಿರುವಾಗ, ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಡ್ರಗ್ ಪೆಡ್ಲರ್ ಪಾತ್ರ…
ಹೆರಾತ್ (ಅಫ್ಘಾನಿಸ್ತಾನ), ಆಗಸ್ಟ್ 20 – ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ, ಮುಖಕ್ಕೆ ದುಪಟ್ಟಾ ಹೊದ್ದ ಮಹಿಳೆಯೊಬ್ಬಳು ಯುವಕನನ್ನು ಕಾಲಿಟ್ಟು, ಕೋಲಿನಿಂದ ನಿರ್ದಯವಾಗಿ ಹೊಡೆಯುತ್ತಿರುವುದು ದೃಶ್ಯಗೊಂಡಿದೆ.…
ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್‌ನ ರಾಜ್‌ಕೋಟ್ ಮೂಲದ ರಾಜೇಶ್ ಸಕ್ರಿಯಾ…