ಉಡುಪಿ, ಜು.24: ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಸಿಕೊಡುವಂತೆ ಲಂಚದ ಬೇಡಿಕೆ ಇಟ್ಟ ಆರೋಪದ ಮೇಲೆ ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ರೇಣುಕಾ ಮತ್ತು ಪ್ರಥಮ ದರ್ಜೆ ಸಹಾಯಕ ಜಯರಾಮ್ ಅವರನ್ನು ಲೋಕಾಯುಕ್ತ ಪೊಲೀಸರು (ಜು.24) ರಂದು ಬಂಧಿಸಿದ್ದಾರೆ.

ಈ ಇಬ್ಬರೂ ಅಧಿಕಾರಿಗಳು, ಉಡುಪಿ ಜಿಲ್ಲೆಯ ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನೆರವೇರಿಸಲು ತಲಾ ₹5,000ರಂತೆ ₹10,000 ಲಂಚವನ್ನು ಬೇಡಿದ್ದರು ಎನ್ನಲಾಗಿದೆ. ಆದರೆ, ಈ ಬೇಡಿಕೆಯನ್ನು ನಿರಾಕರಿಸಿದ ಸಂಘದ ಮುಖ್ಯ ಕಾರ್ಯನಿರ್ವಾಹಕ ನರೇಂದ್ರ ಅವರು ಈ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.

ದೂರಿನ ತನಿಖೆಯ ನಂತರ, ಲೋಕಾಯುಕ್ತ ಪೊಲೀಸರು ಸೂಕ್ಷ್ಮವಾದ ಉಸ್ತುವಾರಿ ಹಾಕಿ ರೇಣುಕಾ ಅವರ ಉಡುಪಿಯಲ್ಲಿರುವ ಕಚೇರಿಗೆ ದಿಢೀರ್ ದಾಳಿ ನಡೆಸಿದರು. ಆ ವೇಳೆ ಲಂಚದ ಹಣ ಸ್ವೀಕರಿಸುತ್ತಿದ್ದ ರೇಣುಕಾವನ್ನು ಪೊಲೀಸರು ಬಂಧಿಸಿದರು. ಜಯರಾಮ್ ಅವರನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಈ ಕಾರ್ಯಚರಣೆಯನ್ನು ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಪ್ರಭಾರ ಡಿವೈಎಸ್‌ಪಿ ಮಂಜುನಾಥ್ ಶಂಕರಹಳ್ಳಿ ನೇತೃತ್ವದ ತಂಡ ಯಶಸ್ವಿಯಾಗಿ ನಡೆಸಿತು. ತಂಡದಲ್ಲಿ ಉಡುಪಿ ಲೋಕಾಯುಕ್ತ PSI ರಾಜೇಂದ್ರ ನಾಯಕ್ ಎಂ.ಎನ್., ಮಂಗಳೂರು PSI ಚಂದ್ರಶೇಖರ್ ಸೇರಿದಂತೆ ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರೋಹಿತ್, ಸತೀಶ್ ಹಂದಾಡಿ, ಮಲ್ಲಿಕಾ, ಪುಷ್ಪಾವತಿ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ, ಸೂರಜ್ ಮತ್ತು ಸುಧೀರ್ ಮುಂತಾದವರು ಭಾಗವಹಿಸಿದ್ದರು.

ಲಂಚದ ಬೇಡಿಕೆ ಹಾಗೂ ಪಡೆಯುವ ಸಂದರ್ಭದಲ್ಲೇ ಬಂಧನಗೊಂಡಿರುವ ಅಧಿಕಾರಿಗಳ ವಿರುದ್ಧ ಮುಂದಿನ ಹಂತದ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Related News

error: Content is protected !!