ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆಯೇ ಪುಂಡರ ಗುಂಪೊಂದು ದಮ್ಕಿ ಹಾಕಿ, ಹಲ್ಲೆಗೆ ಯತ್ನಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಘಟನೆ ನಡೆದಿದ್ದು ಏಪ್ರಿಲ್ 3ರ ಮಧ್ಯರಾತ್ರಿ ಸುಮಾರಿಗೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಮ್ಮ ಹಾಗೂ ಜೀಪ್ ಚಾಲಕ ವೇಣುಗೋಪಾಲ್ ಅವರು ರಾತ್ರಿ ಗಸ್ತಿನಲ್ಲಿ ತೊಡಗಿದ್ದರು. ಈ ವೇಳೆ ಚಿನ್ನಸಂದ್ರ ಗ್ರಾಮದಲ್ಲಿ ನಿಯಮ ಮೀರಿ ತಡರಾತ್ರಿ ವರೆಗೆ ಹೋಟೆಲ್ ತೆರೆಯಲ್ಪಟ್ಟಿರುವುದನ್ನು ಗಮನಿಸಿದ ಪಿಎಸ್‌ಐ ನಾಗಮ್ಮ ಅವರು ವಿಚಾರಣೆ ನಡೆಸಿದ್ದಾರೆ.
ಈ ವಿಚಾರಕ್ಕೆ ಕೆರಳಿದ ಸ್ಥಳೀಯರಾದ ನಾಗೇಂದ್ರ, ನವೀನ್, ಪುನೀತ್ ಹಾಗೂ ನರೇಂದ್ರ ಎಂಬುವವರು ಪೊಲೀಸ್ ಅಧಿಕಾರಿ ಎಂಬ ಗೌರವವನ್ನೇ ಲೆಕ್ಕಿಸದೆ ಏಕವಚನದಲ್ಲಿ ನಿಂದಿಸಿ, ದಮ್ಕಿ ಹಾಕಿದ್ದಾರೆ. ಅಲ್ಲದೆ, ಪಿಎಸ್‌ಐ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ಘಟನೆಗೆ ಗಂಭೀರತೆ ತಂದಿದೆ.
ಈ ಹಲ್ಲೆ ಯತ್ನದ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆ ನಡೆದು ಮೂರು ದಿನಗಳಾದರೂ ಆರೋಪಿಗಳ ಬಂಧನವಾಗದಿರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದ್ದರೂ, ಆರೋಪಿಗಳ ಬಂಧನದ ಕುರಿತು ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ.
