ಶಿರಸಿ (ಬನವಾಸಿ): ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಕಳ್ಳತನದಿಂದ ಭಾರೀ ನಷ್ಟವಾಗಿರುವ ಘಟನೆ ವರದಿಯಾಗಿದೆ. ಕಳ್ಳರು ಬಂಗಾರದ ಅಂಗಡಿಗೂ, ತಗುಲಿರುವ ಮನೆಯೊಂದಕ್ಕೂ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ದಾಸನಕೊಪ್ಪ ಗ್ರಾಮದಲ್ಲಿ ಜೀವನ ಚಂದ್ರಹಾಸ ಶೇಟ್ ಅವರಿಗೆ ಸೇರಿದ ‘ವಿಘ್ನೇಶ್ವರ ಜ್ಯುವೆಲ್ಲರ್ಸ್’ ಎಂಬ ಚಿನ್ನದ ಅಂಗಡಿಯಲ್ಲಿ ಕಳ್ಳರು ನುಗ್ಗಿದ್ದು, ಅಂಗಡಿಯ ಕೌಂಟರ್‌ನಲ್ಲಿ ಇರಿಸಿದ್ದ ಸುಮಾರು 15 ಗ್ರಾಂ ಚಿನ್ನಾಭರಣ (1.20 ಲಕ್ಷ ರೂ. ಮೌಲ್ಯ) ಮತ್ತು ಬೇರೆ ಬೇರೆ ಮಾದರಿಯ ಬೆಳ್ಳಿ ಆಭರಣಗಳು (ಅಂದಾಜು 1.17 ಲಕ್ಷ ರೂ. ಮೌಲ್ಯ) ದೋಚಲಾಗಿದೆ.

ಇದಲ್ಲದೇ, ಅಂಗಡಿಗೆ ಹೊಂದಿಕೊಂಡಿದ್ದ ದತ್ತಾತ್ರೇಯ ದೇವಪ್ಪ ಶೇಟ್ ಅವರ ಮನೆಗೆ ಮುಂಬಾಗಿಲು ಒಡೆದು ನುಗ್ಗಿದ ಕಳ್ಳರು, ಅಲ್ಲಿ ಇದ್ದ 1,550 ಗ್ರಾಂ ಬೆಳ್ಳಿ ಆಭರಣಗಳು ಮತ್ತು 15 ಗ್ರಾಂ ತೂಕದ ಚಿನ್ನದ ಮೂಗಿನ ಬೊಟ್ಟುಗಳನ್ನು ಕದ್ದೊಯ್ದಿದ್ದಾರೆ.

ಘಟನೆಯ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಹಿನ್ನಲೆಯಲ್ಲಿ ಶ್ವಾನಪಡೆ ಸಹ ಬಳಸಿ ತನಿಖೆ ಮುಂದುವರೆಸಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ, ಕಳವಾದ ಆಭರಣಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಆರಂಭಿಸಲಾಗಿದೆ.

ಸ್ಥಳೀಯರಲ್ಲಿ ಆತಂಕ ಮೂಡಿಸಿರುವ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕಳ್ಳರ ಚಲನವಲನಗಳನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳ ಸಹಾಯವೂ ಪಡೆಯಲಾಗುತ್ತಿದೆ. ವರದಿ: ಮಂಜುನಾಥ ಎಫ್ ಎಚ್

Related News

error: Content is protected !!