ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರಕರಣಕ್ಕೆ ಈಗ ಅಚ್ಚರಿ ಮೂಡಿಸುವ ತಿರುವು ಸಿಕ್ಕಿದೆ. 74 ವರ್ಷದ ಪಂಪಣ್ಣ ಸಜ್ಜನ ಕೊಲೆ ಪ್ರಕರಣದಲ್ಲಿ ಆರಂಭದಲ್ಲಿ ಯಾರ ಕೈವಾಡ ಎಂಬುದು ಸ್ಪಷ್ಟವಾಗದಿದ್ದರೂ, ತನಿಖೆ ಮುಂದುವರಿದಂತೆ ಈ ಕೊಲೆಯ ಹಿಂದಿನ ನಿಜಾಂಶ ಬಯಲಾಗಿದೆ. ತಂದೆಯ ಅನೈತಿಕ ವರ್ತನೆಯಿಂದ ಬೇಸತ್ತ ಮಗನೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದಾನೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಮಾರ್ಚ್ 12ರ ರಾತ್ರಿ ಗೋನಾಳ ಗ್ರಾಮದಲ್ಲಿ ಪಂಪಣ್ಣನನ್ನು ಕೊಲೆ ಮಾಡಲಾಗಿತ್ತು. ಘಟನೆ ಬಳಿಕ ಮೃತನ ಮಗ ಶರಣಬಸಪ್ಪ ವಡಗೇರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಗೊಂದಲಕ್ಕೀಡಾಗಿದ್ದರೂ, ನಾಲ್ಕು ದಿನಗಳ ತನಿಖೆಯ ನಂತರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಿರುಪತಿ ಮೂಲದ ರಮೇಶ್, ಜಿ. ವಿರೇಶ್, ಎಂ. ವಿರೇಶ್ ಹಾಗೂ ಕೃಷ್ಟ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪಂಪಣ್ಣನ ಹತ್ಯೆಗೆ ಸುಪಾರಿ ನೀಡಿದ್ದು ಅವನ ಮತ್ತೊಬ್ಬ ಪುತ್ರ ನರಸರೆಡ್ಡಿ ಎಂಬುದು ತಿಳಿದುಬಂದಿದೆ. ಆರಂಭದಲ್ಲಿ ಆಸ್ತಿ ವಿಚಾರಕ್ಕಾಗಿ ಕೊಲೆ ನಡೆದಿದೆ ಎಂಬ ಅನುಮಾನವಿದ್ದರೂ, ತನಿಖೆಯ ವೇಳೆ ಪಂಪಣ್ಣನ ಮೊಬೈಲ್‌ನಲ್ಲಿ ಸಿಕ್ಕ ಫೋಟೋಗಳು ಸತ್ಯವನ್ನು ಬಯಲಿಗೆಳೆದವು.
ಮೊಬೈಲ್ ಪರಿಶೀಲನೆಯ ವೇಳೆ ಹಲವು ಮಹಿಳೆಯರೊಂದಿಗೆ ಪಂಪಣ್ಣ ತೆಗೆಸಿಕೊಂಡಿದ್ದ ಫೋಟೋಗಳು ಪತ್ತೆಯಾಗಿದ್ದು, ಅವನು ಅನೈತಿಕ ಸಂಬಂಧಗಳನ್ನು ಹೊಂದಿದ್ದನೆಂಬುದು ತಿಳಿದುಬಂದಿದೆ. ಪಂಪಣ್ಣ ತನ್ನ ಕುಟುಂಬದಿಂದ ದೂರವಾಗಿ ಹೊಲದಲ್ಲಿ ವಾಸವಾಗಿದ್ದು, ಅಲ್ಲಿ ಮಹಿಳೆಯರನ್ನು ಕರೆಸಿ ದುಡ್ಡಿನ ಆಮಿಷ ನೀಡಿ ಸಂಬಂಧ ಹೊಂದುತ್ತಿದ್ದನೆಂಬ ಆರೋಪ ಹೊರಬಂದಿದೆ.
ಪಂಪಣ್ಣನಿಗೆ ಒಟ್ಟು 48 ಎಕರೆ ಜಮೀನು ಇದ್ದು, ಅದರಲ್ಲಿ 12 ಎಕರೆ ಜಮೀನನ್ನು ತನ್ನ ಮೂವರು ಮಕ್ಕಳಿಗೆ ಹಂಚಿಕೊಟ್ಟಿದ್ದ. ಉಳಿದ ಜಮೀನಿನಿಂದ ಬಂದ ಆದಾಯವನ್ನು ತನ್ನ ವೈಯಕ್ತಿಕ ಖರ್ಚುಗಳಿಗೆ ಬಳಸುತ್ತಿದ್ದನು. ಕಳೆದ 15 ವರ್ಷಗಳಿಂದ ಹೊಲದಲ್ಲೇ ಶೆಡ್ ನಿರ್ಮಿಸಿಕೊಂಡು ಪತ್ನಿಯೊಂದಿಗೆ ವಾಸವಾಗಿದ್ದ. ಪತ್ನಿ ಎಂಟು ವರ್ಷಗಳ ಹಿಂದೆ ಸಾವನ್ನಪ್ಪಿದ ಬಳಿಕವೂ ಏಕಾಂಗಿಯಾಗಿ ಅಲ್ಲೇ ಜೀವನ ನಡೆಸುತ್ತಿದ್ದನು.
ಆದರೆ, ಅವನ ಅನೈತಿಕ ವರ್ತನೆ ಕುಟುಂಬದೊಳಗೂ ತಲುಪಿತ್ತು. ತನ್ನ ಸೊಸೆಯ ಜೊತೆಯೂ ಅಸಭ್ಯ ವರ್ತನೆ ನಡೆಸುತ್ತಿದ್ದನೆಂಬ ವಿಷಯ ತಿಳಿದ ನರಸರೆಡ್ಡಿ ಕೋಪಗೊಂಡು ತಂದೆಯನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ. ನಂತರ ನಾಲ್ವರನ್ನು ಸಂಪರ್ಕಿಸಿ ಸುಮಾರು 2 ಲಕ್ಷ ರೂಪಾಯಿ ನೀಡಿ ಕೊಲೆ ಮಾಡಲು ಸುಪಾರಿ ನೀಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ಕುಟುಂಬ ಸಂಬಂಧಗಳ ಕುಸಿತ ಮತ್ತು ಅನೈತಿಕ ವರ್ತನೆಯ ಪರಿಣಾಮ ಎಷ್ಟರ ಮಟ್ಟಿಗೆ ಭೀಕರವಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
