ಜೈಲುಗಳಲ್ಲಿ ಕೈದಿಗಳು ಐಶಾರಾಮಿ ಜೀವನ ನಡೆಸುತ್ತಿರುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಧಾರವಾಡ ಕೇಂದ್ರ ಕಾರಾಗೃಹದಿಂದಲೇ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಅಪ್ರಾಪ್ತ ಸಂತ್ರಸ್ತೆಗೆ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಫರ್ವೇಜ್ ಎಂಬಾತ, ಜೈಲಿನೊಳಗಿಂದಲೇ ಬಾಲಕಿಗೆ ನಿರಂತರವಾಗಿ ವಿಡಿಯೋ ಕರೆ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ, ನ್ಯಾಯಾಲಯದಲ್ಲಿ ತನ್ನ ಪರವಾಗಿ ಸಾಕ್ಷಿ ಹೇಳುವಂತೆ ಒತ್ತಾಯಿಸಿದ್ದು, ಪಾಲಿಸದಿದ್ದರೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಆರೋಪಿಯು ತನ್ನ ಕೈ ಮೇಲೆ ಸಂತ್ರಸ್ತೆಯ ಹೆಸರನ್ನು ಬರೆದುಕೊಂಡು ವಿಡಿಯೋ ಕರೆ ಮಾಡುತ್ತಿದ್ದನು. ಅಲ್ಲದೇ, ಕರೆ ಸ್ವೀಕರಿಸದಿದ್ದರೆ ‘ನೇಹಾ ಹಿರೇಮಠ್‌ಗೆ ಆದ ಗತಿಯೇ ನಿನಗೂ ಆಗುತ್ತದೆ’ ಎಂದು ಬೆದರಿಕೆ ಹಾಕಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜೊತೆಗೆ, ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ ಎಂದು ತಿಳಿದುಬಂದಿದೆ.

ಈ ಘಟನೆ ಜೈಲುಗಳಲ್ಲಿ ಮೊಬೈಲ್ ಫೋನ್‌ಗಳ ಅಕ್ರಮ ಬಳಕೆಯ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ. ಅಧಿಕಾರಿಗಳು ಮೊಬೈಲ್ ಬಳಕೆಗೆ ಕಟ್ಟುನಿಟ್ಟಿನ ನಿಷೇಧವಿದೆ ಎಂದು ಹೇಳುತ್ತಿದ್ದರೂ, ವಾಸ್ತವ ಸ್ಥಿತಿ ಬೇರೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿದೆ.

ಇದಲ್ಲದೆ, ಈ ಬೆಳವಣಿಗೆ ಕುರಿತು ತಿಳಿದಿದ್ದರೂ ಜೈಲಾಧಿಕಾರಿಗಳು ನಿರ್ಲಕ್ಷ್ಯ ತೋರಿದರೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Related News

error: Content is protected !!