ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಬೆಚ್ಚಿಬೀಳಿಸಿದೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ದುಷ್ಕರ್ಮಿಗಳು, ಬಳಿಕ ಶವವನ್ನು ರಸ್ತೆ ಬದಿಯಲ್ಲೇ ಸುಟ್ಟು ಹಾಕಿರುವ ಭಯಾನಕ ಘಟನೆ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಶಿಕ್ಷಕಿಯನ್ನು 57 ವರ್ಷದ ಜ್ಯೋತಿ ಕಪಾಳೆ ಎಂದು ಗುರುತಿಸಲಾಗಿದೆ. ಅವರು ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂಜರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲಸದ ನಿಮಿತ್ತ ಅವರು ಬೀದರ್‌ನಲ್ಲಿ ವಾಸವಾಗಿದ್ದು, ವಾರಕ್ಕೊಮ್ಮೆ ಕಲಬುರಗಿಯ ಮನೆಗೆ ಬಂದು ಹೋಗುತ್ತಿದ್ದರು.
ಇದೀಗ ಕಲಬುರಗಿಯಿಂದ ಬೀದರ್‌ಗೆ ತೆರಳುವ ವೇಳೆ, ಮಾರ್ಗ ಮಧ್ಯದಲ್ಲಿರುವ ಕಲ್ಮೂಡ ಗ್ರಾಮದ ರಸ್ತೆ ಬದಿಯಲ್ಲಿ ಜ್ಯೋತಿ ಕಪಾಳೆ ಅವರ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದುಷ್ಕರ್ಮಿಗಳು ಮೊದಲು ಅವರನ್ನು ಕೊಲೆ ಮಾಡಿ, ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಶವವನ್ನು ಸುಟ್ಟು ಹಾಕಿರುವುದಾಗಿ ಶಂಕಿಸಲಾಗಿದೆ.
ಈ ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.
