ಬೆಂಗಳೂರು: ವಾರ್ಷಿಕವಾಗಿ ₹40 ಲಕ್ಷಕ್ಕೂ ಅಧಿಕ ವಹಿವಾಟು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಗೆ ಬರದೇ ವಹಿವಾಟು ಮುಂದುವರೆಸುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ವಾಣಿಜ್ಯ ತೆರಿಗೆ ಇಲಾಖೆ, ಈ ರೀತಿಯ ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆಯ ಕಲಂ 22ರಂತೆ, ಸರಕು ಪೂರೈಕೆದಾರರು ವರ್ಷದಲ್ಲಿ ₹40 ಲಕ್ಷಕ್ಕಿಂತ ಹೆಚ್ಚು ಮತ್ತು ಸೇವಾ ಪೂರೈಕೆದಾರರು ₹20 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದ್ದರೆ ಜಿಎಸ್‌ಟಿ ನೋಂದಣಿ ಕಡ್ಡಾಯ. ಆದರೆ, 2021–22ರಿಂದ 2024–25ರ ಅವಧಿಯಲ್ಲಿ ಯುಪಿಐ (ಆನ್‌ಲೈನ್ ಪೇಮೆಂಟ್‌) ಮೂಲಕ ಈ ಮಟ್ಟದ ವಹಿವಾಟು ನಡೆಸಿದರೂ ಹಲವರು ನೋಂದಣಿ ಮಾಡಿಸದೇ ಇದ್ದ ವಿಷಯ ಈಗ ಬಹಿರಂಗವಾಗಿದೆ.

ಈ ಹಿನ್ನೆಲೆಯಲ್ಲಿ, ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಎಲ್ಲ ವ್ಯಾಪಾರಿಗಳು ಶೇಕಡಾ 1ರಷ್ಟು ತೆರಿಗೆ ಪಾವತಿಸಿ ತಕ್ಷಣ ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಪಡೆಯುವಂತೆ ಇಲಾಖೆ ಸೂಚನೆ ನೀಡಿದೆ. ಯುಪಿಐ ಹಾಗೂ ನಗದು ವಹಿವಾಟು ಸೇರಿಸಿ ವಾರ್ಷಿಕ ₹40 ಲಕ್ಷದಿಂದ ₹1.5 ಕೋಟಿ ರು.ವರೆಗೆ ವ್ಯಾಪಾರ ನಡೆಸುವವರೇ ಈ ನಿರ್ದಿಷ್ಟ ಸೂಚನೆಗೆ ಒಳಪಡುತ್ತಾರೆ.

ಅಂಥವರ ವಿರುದ್ಧ ಕ್ರಮಕೈಗೊಳ್ಳುವ ಕ್ರಮದಲ್ಲಿ, ಇಲಾಖೆ ಈಗಾಗಲೇ ನೋಟಿಸ್‌ ನೀಡಿದ್ದು, ವ್ಯಾಪಾರಿಗಳಿಂದ ತಮ್ಮ ಮಾರಾಟದ ವಿವರಗಳನ್ನು ನೀಡುವಂತೆ ಹಾಗೂ ಬಾಕಿ ತೆರಿಗೆ ಪಾವತಿಸುವಂತೆ ಸೂಚಿಸಿದೆ. ನೋಟಿಸ್ ಪಡೆದವರು ತಕ್ಷಣ ಜಿಎಸ್‌ಟಿ ನೋಂದಣಿ ಮಾಡಿಸಿಕೊಳ್ಳಬೇಕು ಎಂಬುದೂ ಇಲಾಖೆ ನಿರ್ದೇಶನವಾಗಿದೆ.

ಇದೇ ವೇಳೆ, ನಿಯಮ ಉಲ್ಲಂಘನೆ ಮಾಡುತ್ತಿರುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸಲಾಗುವುದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

error: Content is protected !!