ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೋಮವಾರ ಬೆಳಿಗ್ಗೆ ವಾಕಿಂಗ್‌ನ ವೇಳೆ ತೀವ್ರ ತಲೆತಿರುಗುವಿಕೆ ಅನುಭವಿಸಿದ ಹಿನ್ನೆಲೆ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿಎಂ ಸ್ಟಾಲಿನ್ ಅವರನ್ನು ತುರ್ತು ವೈದ್ಯಕೀಯ ಪರೀಕ್ಷೆಗಾಗಿ ಗ್ರೀನ್ ವೇಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ನಿಖರವಾಗಿ ಪರಿಶೀಲಿಸುತ್ತಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ, ಅವರು ತೀವ್ರ ಸಮಸ್ಯೆ ಎದುರಿಸುತ್ತಿಲ್ಲದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆ ಮತ್ತು ವಿಶ್ರಾಂತಿ ನೀಡಲಾಗುತ್ತಿದೆ ಎಂದು ವೈದ್ಯಕೀಯ ತಂಡ ತಿಳಿಸಿದೆ. ವೈದ್ಯರು ಅವರ ಮೆಡಿಕಲ್ ಪರೀಕ್ಷೆಗಳ ಫಲಿತಾಂಶದ ಮೇಲೆ ಮುಂದಿನ ಚಿಕಿತ್ಸೆ ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲಿದ್ದಾರೆ.
ಸಿಎಂ ಸ್ಟಾಲಿನ್ ಆರೋಗ್ಯದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಮತ್ತು ಪಕ್ಷದ ನಾಯಕರಿಂದ ಚಿಂತೆ ವ್ಯಕ್ತವಾಗಿದ್ದು, ಶೀಘ್ರ ಸೌಖ್ಯಕ್ಕಾಗಿ ಪ್ರಾರ್ಥನೆಗಳು ಮುಂದುವರಿದಿವೆ.
