ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಬ್ಯಾಂಕ್ ಉದ್ಯೋಗಿ ಭುವನೇಶ್ವರಿ (39) ಹತ್ಯೆ ಪ್ರಕರಣದಲ್ಲಿ ಮಾಗಡಿ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ, ಏಳು ಮಂದಿ ಆರೋಪಿಗಳ ವಿರುದ್ಧ 495 ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

2025ರ ಡಿಸೆಂಬರ್ 23ರಂದು ನಡೆದ ಈ ಪ್ರಕರಣದಲ್ಲಿ ಪತಿ ಸೆಲ್ವ ಬಾಲಮುರುಗನ್ ಮುಖ್ಯ ಆರೋಪಿಯಾಗಿದ್ದು, ಆತನೊಂದಿಗೆ ಅಭಿಮನ್ಯು ಸಿಂಗ್, ಮೌಲೇಶ್ ಕುಮಾರ್ ಹಾಗೂ ಪೆರಿಯಾಸ್ವಾಮಿ ಬಂಧಿತರಾಗಿದ್ದಾರೆ. ಇನ್ನು ರಾಹುಲ್, ಹರೀಶ್ ಮತ್ತು ಸೂರ್ಯ ತಲೆಮರೆಸಿಕೊಂಡಿದ್ದು, ಎಲ್ಲರ ವಿರುದ್ಧವೂ ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಮೃತ ಭುವನೇಶ್ವರಿ ಖಾಸಗಿ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಪತಿ ಬಾಲಮುರುಗನ್ ವೈಟ್‌ಫೀಲ್ಡ್‌ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದು, ದಂಪತಿ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದು, ಭುವನೇಶ್ವರಿ ವಿಚ್ಛೇದನ ಕೋರಿ ನೋಟಿಸ್ ನೀಡಿದ್ದರು.

ಈ ನಡುವೆ, ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಸಂಶಯದಿಂದ ಕೋಪಗೊಂಡ ಬಾಲಮುರುಗನ್, ಡಿಸೆಂಬರ್ 23ರಂದು ಸಂಜೆ ನಡುರಸ್ತೆಯಲ್ಲೇ ಪತ್ನಿಯ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಹತ್ಯೆಗೈದು, ನಂತರ ಸ್ವಯಂವಾಗಿ ಮಾಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದನು.

ತನಿಖೆಯಲ್ಲಿ ಇನ್ನಷ್ಟು ಶಾಕಿಂಗ್ ಸಂಗತಿಗಳು ಬೆಳಕಿಗೆ ಬಂದಿವೆ. ಪತ್ನಿಯನ್ನು ಕೊಲ್ಲಲು ಬಾಲಮುರುಗನ್ ಮೊದಲು ₹1 ಲಕ್ಷಕ್ಕೆ ಸುಪಾರಿ ನೀಡಿದ್ದನು. ತಮಿಳುನಾಡು ಮೂಲದ ಮೌಲೇಶ್ ಕುಮಾರ್ ಮತ್ತು ಪೆರಿಯಾಸ್ವಾಮಿಗೆ ಈ ಕೆಲಸ ಒಪ್ಪಿಸಲಾಗಿತ್ತು. ಆದರೆ ಅವರು ವಿಫಲವಾದ ಬಳಿಕ, ಅಭಿಮನ್ಯು ಸಿಂಗ್ ನೆರವಿನಿಂದ ಬಿಹಾರದಲ್ಲಿ ಕಂಟ್ರಿ ಮೇಡ್ ಪಿಸ್ತೂಲ್ ಖರೀದಿಸಿದ್ದನು.

ಇದರ ಜೊತೆಗೆ, ಪಿಸ್ತೂಲ್ ಪ್ರಯತ್ನ ವಿಫಲವಾದರೆ ಚಾಕುವಿನಿಂದ ಹತ್ಯೆ ಮಾಡಲು ಒಂದು ತಿಂಗಳ ಹಿಂದೆಯೇ ಸಿದ್ಧತೆ ಮಾಡಿಕೊಂಡಿದ್ದನು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣವು ಪೂರ್ವನಿಯೋಜಿತ ಹತ್ಯೆಯ ಸ್ಪಷ್ಟ ಚಿತ್ರಣ ನೀಡಿದ್ದು, ಮುಂದಿನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಲಿದೆ.

Related News

error: Content is protected !!