ಪ್ರೀತಿ ಹೆಸರಿನಲ್ಲಿ ವಂಚನೆ ಆರೋಪದ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಅಟ್ಟೂರು ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಅಭಿಷೇಕ್ (23) ಎಂದು ಗುರುತಿಸಲಾಗಿದೆ.

ಲವರ್ ಫೇಲ್ಯೂರ್‌ನಿಂದ ಮನಸ್ಸಿಗೆ ತೀವ್ರ ಆಘಾತಗೊಂಡಿದ್ದ ಅಭಿಷೇಕ್, ಆತ್ಮಹತ್ಯೆಗೆ ಮುನ್ನ ತನ್ನ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಈ ವೇಳೆ ಕಣ್ಣೀರು ಹಾಕುತ್ತಾ “ನನ್ನನ್ನು ಯಾಕೆ ಮೋಸ ಮಾಡಿದೆ?” ಎಂದು ಪ್ರಶ್ನಿಸಿದ ಬಳಿಕ, ಆಕೆಯ ಮುಂದೆನೇ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಯ ನಂತರ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಇದೇ ತಿಂಗಳ 9ರಂದು ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ ಅಭಿಷೇಕ್ ಮಾಡಿದ ವಿಡಿಯೋ ಕಾಲ್ ಹಾಗೂ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳು ಕೂಡ ಪತ್ತೆಯಾಗಿದ್ದು, ಅವು ಪ್ರಕರಣದ ಪ್ರಮುಖ ಸಾಕ್ಷಿಗಳಾಗಿವೆ.

ಅಭಿಷೇಕ್ ತನ್ನ ರೂಮಿನ ಕಿಟಕಿಗೆ ಕಬ್ಬಿಣದ ವೇಲು ಕಟ್ಟಿ ನೇಣು ಬಿಗಿದುಕೊಂಡು ಜೀವ ತೆತ್ತಿದ್ದಾನೆ. ಈ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಯುವತಿಯನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋದಲ್ಲಿ ಅಭಿಷೇಕ್, “ಇಷ್ಟು ದಿನ ಪ್ರೀತಿ ಮಾಡಿದ್ದು ಯಾಕೆ? ಈಗ ಯಾಕೆ ದೂರವಾಗಿದ್ದೀಯ?” ಎಂದು ಬೇಸರ ವ್ಯಕ್ತಪಡಿಸಿರುವುದು ಕಂಡುಬಂದಿದೆ. ಇದೇ ವೇಳೆ, ಮೃತನ ಕುಟುಂಬಸ್ಥರು ಯುವತಿ ಮತ್ತು ಆಕೆಯ ಪೋಷಕರ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ.

ಇನ್ನೊಂದೆಡೆ, ಈ ಹಿಂದೆ ಯುವತಿ ಹಾಗೂ ಆಕೆಯ ಪೋಷಕರು ಅಭಿಷೇಕ್ ವಿರುದ್ಧ ದೂರು ನೀಡಿದ್ದರೆಂಬ ಮಾಹಿತಿಯೂ ಹೊರಬಂದಿದೆ. “ನನ್ನ ಮಗಳ ಹಿಂದೆ ಬಿದ್ದಿದ್ದಾನೆ” ಎಂದು ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರಂತೆ. ಬಳಿಕ ಠಾಣೆಯಲ್ಲಿ ಇಬ್ಬರ ನಡುವೆ ರಾಜಿ ಸಂಧಾನವೂ ನಡೆದಿತ್ತು ಎಂದು ತಿಳಿದು ಬಂದಿದೆ.

ಪ್ರಸ್ತುತ ಪ್ರಕರಣದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related News

error: Content is protected !!