ಮಂಗಳೂರು, ಆಗಸ್ಟ್ 5 – ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣದ ತನಿಖೆ ಮುಂದುವರೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸೋಮವಾರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಮಾನವ ಶವದ ಅವಶೇಷಗಳನ್ನು ಪತ್ತೆ ಹಚ್ಚಿದೆ.
ಎಸ್‌ಐಟಿಯ ಮೂಲಗಳ ಪ್ರಕಾರ, ಈ ಅವಶೇಷಗಳು ಸಾಕ್ಷಿದಾರನ ಸೂಚನೆಯ ಮೇರೆಗೆ ತೋರಿಸಲಾದ 11ನೇ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿರುವ ಕಾಡಿನೊಳಗೆ ನೆಲದ ಮೇಲೆ ಪತ್ತೆಯಾಗಿದ್ದು, ತಲೆಬುರುಡೆ, ಬೆನ್ನು ಮೂಳೆಯು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮೂಳೆಗಳು ವಶಪಡಿಸಲಾಗಿದೆ.
ವೈಜ್ಞಾನಿಕವಾಗಿ ಸಂಗ್ರಹ
“ಉದ್ದನೆಯ ಬೆನ್ನುಮೂಳೆಯೂ ಸಹ ಸ್ಥಳದಲ್ಲೇ ಪತ್ತೆಯಾಗಿದೆ. ತಜ್ಞರ ತಂಡವು ಎಲ್ಲ ಅವಶೇಷಗಳನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಮುಂದಿನ ಹಂತದ ಪರೀಕ್ಷೆಗೆ ಕಳುಹಿಸಿದೆ. ಅಲ್ಲದೇ, ಶವವನ್ನು ಗುಂಡಿ ತೋಡಿ ಹೂತ ಪ್ರಮಾಣವಾಗಿ ಒಂದು ಸೀರೆಗೂ ಪತ್ತೆಯಾಗಿದೆ,” ಎಂದು ಎಸ್ಐಟಿಯ ಮೂಲಗಳು ತಿಳಿಸಿವೆ.
ಅವಶೇಷ ಪತ್ತೆ ಕುರಿತು ವ್ಯಾಪಕ ಶೋಧ ಕಾರ್ಯ
ಸೋಮವಾರ ಬೆಳಿಗ್ಗೆ 11:30ರಿಂದ ಕಾಡಿನಲ್ಲಿ ಎಸ್ಐಟಿಯವರು ಶೋಧ ಕಾರ್ಯಾರಂಭಿಸಿ, ಮಧ್ಯಾಹ್ನದ ವಿರಾಮವಿಲ್ಲದೇ ಸಂಜೆ 6:15ರವರೆಗೆ ಶೋಧ ಮುಂದುವರೆಸಿದರು. ಈ ವೇಳೆ, ಇಬ್ಬರು ಕಮಾಂಡೊ ಸಿಬ್ಬಂದಿ ಸೇರಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿತ್ತು. ಸ್ಥಳದಲ್ಲಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಮತ್ತು ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಉಪಸ್ಥಿತರಿದ್ದರು.
ಇದೀಗವರೆಗೂ 11 ಜಾಗಗಳಲ್ಲಿ ಶೋಧ
ಧರ್ಮಸ್ಥಳದ ಸ್ನಾನಘಟ್ಟದ ಸುತ್ತಮುತ್ತ 13 ಸ್ಥಳಗಳನ್ನು ಸಾಕ್ಷಿದಾರನು ಗುರುತಿಸಿದ್ದನು. ಈ ಪೈಕಿ 10 ಸ್ಥಳಗಳಲ್ಲಿ ಈಗಾಗಲೇ ಶೋಧ ನಡೆಸಲಾಗಿದ್ದು, ಇದೀಗ 11ನೇ ಸ್ಥಳದಲ್ಲಿ ಶವದ ಮೂಲ ಸುಳಿವು ಸಿಕ್ಕಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಈ ಮೊದಲು ಆರನೇ ಜಾಗದಲ್ಲಿ ಗಂಡಸಿನ ಶವದ ಅವಶೇಷ ಪತ್ತೆಯಾಗಿತ್ತು.
ಶವ ಹೂತು ಹಾಕಲಾಗಿದೆ ಎಂಬ ಭೀತಿಯ ಆರೋಪ
ಎಸ್‌ಡಿಪಿಐ ಮಂಗಳೂರು ಘಟಕದ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ. ಅವರ ಪ್ರಕಾರ, ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆಯುತ್ತಿದೆ. ಇದೂವರೆಗೂ ಈ ಗಂಭೀರ ಸಂಗತಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸದ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರ ನಿಶ್ಚಲತೆಯ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
15 ವರ್ಷದ ಹಿಂದೆ ಬಾಲಕಿಯ ಶಂಕಾಸ್ಪದ ಸಾವು – ಹೊಸ ದೂರು ದಾಖಲು
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ. ’15 ವರ್ಷಗಳ ಹಿಂದೆ 13–15 ವರ್ಷದ ಬಾಲಕಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ಹೂತು ಹಾಕಲಾಗಿದೆ’ ಎಂದು ಜಯಂತ್ ಟಿ. ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.
ಈ ಹಿಂದೆ ಎಸ್‌ಐಟಿಗೆ ದೂರು ಸಲ್ಲಿಸಲು ಜಯಂತ್ ಬೆಳ್ತಂಗಡಿ ಕಚೇರಿಗೆ ತೆರಳಿದ್ದು, ಅಧಿಕಾರಿಗಳ ಸಲಹೆಯಂತೆ ಅವರು ಧರ್ಮಸ್ಥಳ ಠಾಣೆಯಲ್ಲಿ (200/DPS/2025) ದೂರನ್ನು ದಾಖಲಿಸಿದ್ದಾರೆ. ಪೊಲೀಸರು ಈ ದೂರನ್ನು ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಜಯಂತ್ ಟಿ ಯಾರು?
ಸೌಜನ್ಯಾ ಹತ್ಯೆ ಪ್ರಕರಣದ ಹೋರಾಟದಲ್ಲಿ ಶ್ರಮಿಸಿದ ಜಯಂತ್ ಟಿ. ಆರ್‌ಟಿಐ ಕಾರ್ಯಕರ್ತರಾಗಿದ್ದು, ಬೆಂಗಳೂರಿನಲ್ಲಿ ಒಳಾಂಗಣ ವಿನ್ಯಾಸದ ಉದ್ಯಮ ನಡೆಸುತ್ತಿದ್ದಾರೆ. “ನಾನು ಯಾರ ವಿರುದ್ಧವೂ ಅಲ್ಲ, ದೇವಸ್ಥಾನದ ವಿರುದ್ಧವೂ ಅಲ್ಲ, ಕಮ್ಯುನಿಸ್ಟ್ ಕೂಡ ಅಲ್ಲ. 2015ರಿಂದ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ,” ಎಂದು ಅವರು ಹೇಳಿದ್ದಾರೆ.
