ಶಿವಮೊಗ್ಗ: ಇಲ್ಲಿನ ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಕಳ್ಳತನದ ರೀತಿಯ ವಿಭಿನ್ನ ಘಟನೆ ಬೆಳಕಿಗೆ ಬಂದಿದೆ. ಕೈದಿಯೊಬ್ಬನ ಹೊಟ್ಟೆಯಿಂದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಮೊಬೈಲ್ ಫೋನ್‌ವೊಂದನ್ನು ವಶಕ್ಕೆ ಪಡೆದಿದ್ದಾರೆ. ಈ ಅಸಾಧಾರಣ ಘಟನೆ ಜೈಲಿನ ಆಂತರಿಕ ಭದ್ರತೆಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ.

30 ವರ್ಷದ ಕೈದಿ ದೌಲತ್‌ಗೆ ಶಿವಮೊಗ್ಗದ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಜೂನ್ 24 ರಂದು ದೌಲತ್‌ ಜೈಲಿನ ಆಸ್ಪತ್ರೆ ಭೇಟಿ ನೀಡಿ, ತಾನು ಕಲ್ಲು ನುಂಗಿರುವುದಾಗಿ ವೈದ್ಯರಿಗೆ ತಿಳಿಸಿದ. ವೈದ್ಯರು ಪ್ರಾಥಮಿಕ ತಪಾಸಣೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಿದರು.

ಅಲ್ಲಿ ಕೈದಿಗೆ ಎಕ್ಸ್‌ರೇ ಮಾಡಿಸಿದಾಗ, ಆತನ ಹೊಟ್ಟೆಯಲ್ಲಿ ಅಪರಿಚಿತ ವಸ್ತು ಇದ್ದು ಅನುಮಾನ ಉಂಟಾಯಿತು. ತಕ್ಷಣವೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಆ ವಸ್ತುವನ್ನು ಹೊರತೆಗೆದಾಗ ಅದು ಚಿಕ್ಕ ಮೊಬೈಲ್ ಫೋನ್‌ ಎಂದು ಪತ್ತೆಯಾಯಿತು.

ಈ ಅಸಾಮಾನ್ಯ ರೀತಿಯಲ್ಲಿ ಮೊಬೈಲ್‌ ಜೈಲಿನೊಳಗೆ ತಲುಪಿರುವ ಕುರಿತು ಈಗ ಭಾರಿ ಕುತೂಹಲ ಮೂಡಿದ್ದು, ಭದ್ರತಾ ವ್ಯವಸ್ಥೆಯ ಲೋಪವನ್ನೂ ತೋರುತ್ತದೆ. ಈ ಸಂಬಂಧ ಜೈಲು ಅಧೀಕ್ಷಕ ರಂಗನಾಥ್ ಅವರು ಶಂಕೆ ವ್ಯಕ್ತಪಡಿಸಿ, ಪೊಲೀಸರು ತನಿಖೆ ಆರಂಭಿಸುವಂತೆ ದೂರು ನೀಡಿದ್ದಾರೆ.

ಈ ಕುರಿತು ತುಂಗಾನಗರ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಯಾವುದೇ ಒಳಸಂಚು ಅಥವಾ ಭದ್ರತಾ ಉಲ್ಲಂಘನೆಯ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ.

ಜೈಲಿನ ಒಳಗಿನ ಸುರಕ್ಷತಾ ಕ್ರಮಗಳ ಕುರಿತಂತೆ ಇದೀಗ ಅಧಿಕಾರಿಗಳಿಗೆ ತೀವ್ರ ಅಲೆರ್ಟ್ ದೊರೆತಿದೆ.

error: Content is protected !!