ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಹಾಗೂ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಟೆಂಡರ್ ಅಥವಾ ಒಪ್ಪಂದದ ಅವಧಿ ಮುಗಿದ ಕೂಡಲೇ, ಯಾವುದೇ ಮುನ್ಸೂಚನೆ ನೀಡದೆ ಸಂಬಂಧಿತ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಬೇಕೆಂದು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಅಧಿಕಾರಿಗಳಿಗೇ ದಂಡ
ಈ ಆದೇಶದ ಪ್ರಕಾರ, ಒಪ್ಪಂದ ಅವಧಿ ಮುಗಿದ ನಂತರವೂ ಹಳೆಯ ಸಿಬ್ಬಂದಿಯನ್ನು ಮುಂದುವರಿಸಿದರೆ, ಅವರಿಗೆ ನೀಡುವ ವೇತನವನ್ನು ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಖಾತೆಯಿಂದಲೇ ವಸೂಲಿ ಮಾಡಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆರ್ಥಿಕ ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಯಾರಿಗೆ ಅನ್ವಯಿಸುತ್ತದೆ?
ಈ ಸೂಚನೆ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು ಮತ್ತು ಜಿಲ್ಲಾಧಿಕಾರಿಗಳಿಗೆ ಅನ್ವಯಿಸುತ್ತದೆ. ಒಪ್ಪಂದ ಮುಗಿದ ದಿನವೇ ಸೇವೆ ಸ್ವಯಂಚಾಲಿತವಾಗಿ ಕೊನೆಗೊಳ್ಳಲಿದ್ದು, ಪ್ರತ್ಯೇಕ ನೋಟಿಸ್ ಅಗತ್ಯವಿಲ್ಲ.
ಕಾನೂನಾತ್ಮಕ ಹಕ್ಕಿಲ್ಲ
ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ಸರ್ಕಾರ, ಹೊರಗುತ್ತಿಗೆ ನೌಕರರಿಗೆ ಸೇವೆ ಮುಂದುವರಿಸುವ ಅಥವಾ ಕಾಯಂಗೊಳಿಸುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಭಾಗವಾರು ನೌಕರರ ಸಂಖ್ಯೆ
ರಾಜ್ಯದಲ್ಲಿ ಒಟ್ಟು 96,844 ಹೊರಗುತ್ತಿಗೆ ನೌಕರರಿದ್ದು, ಪ್ರಮುಖ ಇಲಾಖೆಗಳ ವಿವರ ಹೀಗಿದೆ:
ಕೃಷಿ ಇಲಾಖೆ – 15,824
ಪಶುಸಂಗೋಪನೆ – 15,376
ಹಿಂದುಳಿದ ವರ್ಗಗಳ ಕಲ್ಯಾಣ – 11,424
ಸಹಕಾರ ಇಲಾಖೆ – 6,511
ಆರೋಗ್ಯ ಇಲಾಖೆ – 2,286
ಈ ಆದೇಶದಿಂದಾಗಿ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಭವಿಷ್ಯದಲ್ಲಿ ಖಾಯಂ ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಾವಿರಾರು ನೌಕರರಿಗೆ ಭಾರೀ ನಿರಾಸೆಯಾಗಿದೆ. ಇನ್ನು ಮುಂದೆ ನೇಮಕಾತಿ ಹೊಸ ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಯಲಿದ್ದು, ಹಳೆಯ ಸಿಬ್ಬಂದಿಗೆ ಆದ್ಯತೆ ನೀಡುವ ಬಾಧ್ಯತೆ ಸರ್ಕಾರಕ್ಕೆ ಇರುವುದಿಲ್ಲ.
